ಕೋಲ್ಕತಾ:ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ನಡೆಯುತ್ತಿದ್ದು, ಸ್ಪೀಕರ್ ಸುಬ್ರತಾ ಮುಖರ್ಜಿ ಪ್ರಮಾಣವಚನ ಬೋಧಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಲ್ಪ ಸಮಯದವರೆಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸಿ ಇಡೀ ಕಾರ್ಯಕ್ರಮವನ್ನು ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳಾದ ಕೋಲ್ಕತಾ, ಉತ್ತರ ಮತ್ತು ದಕ್ಷಿಣ -24 ಪರಗಣಗಳು, ಪುರ್ಬಾ ಮತ್ತು ಪಶ್ಚಿಮ ಮದಿನಿಪುರ, ಹೌರಾ, ಹೂಗ್ಲಿ ಮತ್ತು ಜಾರ್ಗ್ರಾಮ್ ಪ್ರದೇಶದ ಕನಿಷ್ಠ 143 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಅವರಲ್ಲಿ ಎಪ್ಪತ್ತನಾಲ್ಕು ಜನರು ದಿನದ ಮೊದಲಾರ್ಧದಲ್ಲಿ ಮತ್ತು ಉಳಿದವರು ದ್ವಿತೀಯಾರ್ಧದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ.
ಬಿಜೆಪಿಯ ಯಾವುದೇ ಪ್ರತಿನಿಧಿ ಇಂದು ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರದವರೆಗೆ ಮುಂದುವರಿಯಲಿದೆ.