ಗೊಡ್ಡಾ (ಜಾರ್ಖಂಡ್): ಬಿಹಾರದ ಭಾಗಲ್ಪುರ ಜಿಲ್ಲೆಯಿಂದ ಕಳ್ಳತನವಾಗಿದ್ದ ನವಜಾತ ಶಿಶುವನ್ನು ಜಾರ್ಖಂಡ್‌ನ ಗೊಡ್ಡಾದಿಂದ ವಶಪಡಿಸಿಕೊಳ್ಳಲಾಗಿದೆ. ಮಗುವನ್ನು ಕದ್ದ ಮಹಿಳೆ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಜೂನ್ 19 ರಂದು ಭಾಗಲ್ಪುರ ಮಾಯಾಗಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮರುದಿನವೇ ಅಂದ್ರೆ ಜೂನ್ 20 ರ ಬೆಳಗ್ಗೆ ಆ ಮಗು ಕಾಣೆಯಾಗಿತ್ತು. ಮಗುವಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇದರಿಂದ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.
ಮಗುವಿನ ತಂದೆ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಬೆಳಗ್ಗೆ ಆಸ್ಪತ್ರೆಯಿಂದ ರಕ್ತದಾನ ಮಾಡಲು ಹೋಗಿದ್ದೆ. ಆದರೆ ಹಿಂತಿರುಗಿದ ಕೂಡಲೇ ಗಲಾಟೆ ನಡೆಯುತ್ತಿತ್ತು. ನಮ್ಮ ಸಂಬಂಧಿಕರು ಮಗು ನಾಪತ್ತೆಯಾಗಿದೆ ಎಂದು ಹೇಳಿದರು. ಆಗ ನಾನು ಮಗುವನ್ನು ಎಲ್ಲ ಕಡೆಗಳಲ್ಲಿಯೂ ಹುಡುಕಿದೆ, ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಅನೇಕರನ್ನು ವಿಚಾರಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದಾದ ಬಳಿಕ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದೆ ಎಂದು ಹೇಳಿದರು.
ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳತನದ ದೃಶ್ಯ:ಪ್ರಕರಣದ ಮಾಹಿತಿ ಪಡೆದ ತಕ್ಷಣ ಪೊಲೀಸರು ಕಾರ್ಯಾಚರಣೆಗಿದು, ತನಿಖೆಯನ್ನು ಚುರುಕುಗೊಳಿಸಿದರು. ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆದರೆ ದೃಶ್ಯಾವಳಿಯಲ್ಲಿ ಮಹಿಳೆಯ ಚಿತ್ರ ಸ್ಪಷ್ಟವಾಗಿ ಗೋಚರಿಸಲಿಲ್ಲ. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತು.
ಬ್ಯಾಗ್ ನೀಡಿತ್ತು ಕದ್ದ ಮಹಿಳೆಯ ಸುಳಿವು..!: ಇನ್ನು ತನಿಖೆ ವೇಳೆ ಮಗುವನ್ನು ಕದ್ದೊಯ್ದಿದ್ದ ಹಾಸಿಗೆಯ ಪಕ್ಕದ ಬೆಡ್ ಮೇಲೆ ಪೊಲೀಸರಿಗೆ ಬ್ಯಾಗ್ವೊಂದು ಕಾಣಿಸಿಕೊಂಡಿದೆ. ಆ ಬ್ಯಾಗ್ ಮಗುವನ್ನು ಕದ್ದ ಮಹಿಳೆಗೆ ಸೇರಿದ್ದಾಗಿದ್ದು, ಆ ಮಹಿಳೆ ಮಗುವನ್ನು ಕಳ್ಳತನ ಮಾಡಿದ ಭರದಲ್ಲಿ ಬಿಟ್ಟು ಹೋಗಿದ್ದಳು. ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ವಿಳಾಸ ಪತ್ತೆಯಾಗಿದೆ. ನಂತರ ಪೊಲೀಸರು ಆಕೆಯನ್ನು ಹುಡುಕುತ್ತಿರುವಾಗ ಗೊಡ್ಡಾದ ಸುಂದರ್ಪಹಾರಿ ತಲುಪಿದರು. ವಿಚಾರಣೆ ವೇಳೆ ಗೊಡ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವನ್ನು ಅಲ್ಲಿಗೆ ಕರೆತಂದಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಆಸ್ಪತ್ರೆಗೆ ತೆರಳಿದ ಬಳಿಕ ಮಗು ಪತ್ತೆಯಾಗಿದೆ. ಮಗುವಿನ ಅಜ್ಜಿ ಮತ್ತು ತಂದೆ ಮಗುವನ್ನು ಗುರುತಿಸಿದರು.
ದಂಪತಿಯನ್ನು ಬಂಧಿಸಿದ ಪೊಲೀಸರು: ಇನ್ನು ಮಗುವನ್ನು ಕದ್ದ ಮಹಿಳೆಯೊಂದಿಗೆ ಆಕೆಯ ಪತಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದಂಪತಿ ಮಕ್ಕಳನ್ನು ಕದಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆಯೇ ಅಥವಾ ಅವರು ಮೊದಲ ಬಾರಿಗೆ ಈ ರೀತಿ ಮಾಡಿದ್ದಾರೆಯೇ ಎಂಬುದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸದ್ಯ ಭಾಗಲ್ಪುರ ಠಾಣೆ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮಗುವನ್ನು ಹುಡುಕಿಕೊಟ್ಟ ಪೊಲೀಸ್ ವೃಂದಕ್ಕೆ ಪೋಷಕರು ಮತ್ತು ಸಂಬಂಧಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಓದಿ:ಸಂಗಾತಿ ಮೇಲಿನ ಕೋಪದಿಂದ ಮಗು ಅಪಹರಿಸಿದ ತಂದೆ: ಪೊಲೀಸರಿಗೆ ತಲೆನೋವಾದ 'Living Together' ಜೋಡಿಯ ಜಗಳ