ಗಿರಿದಿಹ್(ಜಾರ್ಖಂಡ್): ಜಿಲ್ಲೆಯ ದಿಯೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ದಿನದ ನವಜಾತ ಶಿಶುವೊಂದು ಪೊಲೀಸರು ಬೂಟು ಕಾಲಿನಿಂದ ತುಳಿದ ಕಾರಣ ಸಾವನ್ನಪ್ಪಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮಗುವಿನ ತಾಯಿ ಹಾಗೂ ತಂದೆ ಪೊಲೀಸರ ವಿರುದ್ಧ ಆರೋಪ ಮಾಡಿದ್ದು, ಆರೋಪ ಕೇಳಿ ಬಂದ ತಕ್ಷಣ ಎಸ್ಪಿ ಅಮಿತ್ ರೇಣು ತನಿಖೆ ನಡೆಸಲು ಸೂಚಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:ಮೃತ ಮಗುವಿನ ತಾಯಿ ನೇಹಾ ದೇವಿ ಮಾತನಾಡಿ, ಬುಧವಾರ ಮುಂಜಾನೆ ದಿಯೋರಿ ಪೊಲೀಸ್ ಠಾಣೆಯ ಪೊಲೀಸರ ತಂಡವು ಅವರ ಕುಟುಂಬದ ಸದಸ್ಯ ಭೂಷಣ್ ಪಾಂಡೆಯನ್ನು ಪ್ರಕರಣವೊಂದರಲ್ಲಿ ಬಂಧಿಸಲು ವಾರಂಟ್‌ನೊಂದಿಗೆ ಬಂದಿದ್ದಾರೆ. ಬಂದವರು ಮನೆಯನ್ನೆಲ್ಲಾ ಜಾಲಾಡಿದ್ದಾರೆ. ಈ ವೇಳೆ ಭೂಷಣ್ ಮನೆಯಲ್ಲಿ ಇರಲಿಲ್ಲ. ಪೊಲೀಸರು ಮನೆಯಲ್ಲಿ ಹುಡುಕಾಟದ ವೇಳೆ ನನ್ನ ನಾಲ್ಕು ದಿನದ ಮಗನನ್ನು ಮನೆಯೊಳಗೆ ಬಿಟ್ಟು, ಉಳಿದೆಲ್ಲಾ ಮನೆಯ ಸದಸ್ಯರನ್ನು ಹೊರಗೆ ಕಳುಹಿಸಿದರು. ಪೊಲೀಸರು ಹುಡುಕಾಟ ಮುಗಿದ ಮೇಲೆ ಮನೆಯೊಳಗಿರುವ ಮಗನ ಬಳಿ ಹೋದೆನು. ಆ ವೇಳೆ ಮಗು ಚಲನೆಯಿಲ್ಲದೆ ಮಲಗಿದ್ದನ್ನು ಕಂಡು ಆಘಾತಕ್ಕೊಳಗಾದೆ ಎಂದು ತಿಳಿಸಿದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ನೋಡಿದ ಮನೆಯವರು ತಕ್ಷಣ ಮಗುವನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಇದಾದ ಬಳಿಕ ಮಗುವಿನ ತಾಯಿ ನೇಹಾ ದೇವಿ, ಪೊಲೀಸರ ತಂಡ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವಾಗ ಅವರ ಬೂಟು ಕಾಲಿನಿಂದ ತುಳಿದ ಕಾರಣ ಮಗು ಸಾವನ್ನಪ್ಪಿದೆ ಎಂದು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.
ದೇವಿ ಅವರ ಪತಿ, ಆರೋಪಿ ಭೂಷಣ್ ಅವರ ತಮ್ಮ ರಮೇಶ್ ಪಾಂಡೆ ಕೂಡ ಪೊಲೀಸರು ತಮ್ಮ ಮಗುವನ್ನು ತುಳಿದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. 'ಪೊಲೀಸರು ಮನೆಯಿಂದ ಹೊರಬಂದಾಗ, ನಾವು ನಮ್ಮ ಮಗು ಮಲಗಿದ್ದ ಕೋಣೆಗೆ ಹೋದೆವು. ನಾನು ಮಗುವನ್ನು ನೋಡಿದಾಗ, ಅವನ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ' ಎಂದು ಪಾಂಡೆ ಹೇಳಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು:ಈ ಪ್ರಕರಣದ ಕುರಿತು ಮಾಹಿತಿ ಪೊಲೀಸರ ಗಮನಕ್ಕೆ ಬಂದ ತಕ್ಷಣ ತನಿಖೆ ಆರಂಭಿಸಲಾಗಿದೆ ಎಂದು ಡಿಎಸ್ಪಿ ಸಂಜಯ್ ರಾಣಾ ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೇ ಮಾಹಿತಿ ನೀಡುವುದಿಲ್ಲ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಎಸ್ಪಿ ಅಮಿತ್ ರೇಣು ಅವರ ಸೂಚನೆ ಮೇರೆಗೆ ಈ ಪ್ರಕರಣದ ತನಿಖೆ ಆರಂಭಿಸಲಾಗಿದೆ. ಡಿಎಸ್ಪಿ ಸಂಜಯ್ ರಾಣಾ ಮತ್ತು ಖೋರಿಮ್ಹುವಾ ಎಸ್ಡಿಪಿಒ ಮುಖೇಶ್ ಕುಮಾರ್ ಮಹತೋ ತನಿಖಾ ತಂಡದ ಭಾಗವಾಗಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಸಹದೇವ ಪ್ರಸಾದ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಮೃತ ಮಗುವಿನ ಪಂಚನಾಮವನ್ನು ಮ್ಯಾಜಿಸ್ಟ್ರೇಟ್ ಕಮ್ ದಿಯೋರಿ ಬಿಡಿಒ ಇಂದ್ರಲಾಲ್ ಓಹ್ದರ್ ನೇತೃತ್ವದಲ್ಲಿ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಸಹದೇವ ಪ್ರಸಾದ್ ಅವರ ಸಮ್ಮುಖದಲ್ಲಿ ಮಾಡಲಾಯಿತು.
ಬಾಬುಲಾಲ್ ಟ್ವೀಟ್ : ಮತ್ತೊಂದೆಡೆ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಈ ಘಟನೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಘಟನೆ ಬೆಚ್ಚಿ ಬೀಳಿಸಿದೆ. ಜಾರ್ಖಂಡ್ ಪೊಲೀಸರು ಮಾತ್ರವಲ್ಲ, ಇದು ನಿರಂಕುಶ ಮತ್ತು ರಾಕ್ಷಸ ಸರ್ಕಾರದ ಕಾರ್ಯಶೈಲಿಗೆ ಜೀವಂತ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ