ದಾಹೋದ್(ಗುಜರಾತ್):ನೀರಿಲ್ಲದ ಅಂದಾಜು 40 ಅಡಿ ಆಳದ ಬಾವಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಗುಜರಾತ್ನ ದಾಹೋದ್ನ ಗರ್ಬಡಾ ಗ್ರಾಮದಲ್ಲಿ ಘಟನೆ ನಡೆದಿದೆ. ಶಿಶುವಿನ ಕಾಲಿಗೆ ಹಗ್ಗ ಕಟ್ಟಿ ನೀರಿಲ್ಲದ ಬಾವಿಯಲ್ಲಿ ಇಳಿಸಲಾಗಿದೆ. ಮಗುವಿನ ಕಾಲಿಗೆ ಇರುವೆ ಕಚ್ಚಿದ್ದು, ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಕರಣ ಹೊರಬಂದಿದ್ದು ಹೇಗೆ?: 60 ವರ್ಷದ ಜೋಖಲಭಾಯಿ ಎಂಬುವವರು ಹೊಲಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಗುವಿನ ಆಕ್ರಂದನ ಅವರಿಗೆ ಕೇಳಿಸಿದೆ. ಬಾವಿಗೆ ಇಣುಕಿ ನೋಡಿದಾಗ ಮಗು ಪತ್ತೆಯಾಗಿತ್ತು. ತಕ್ಷಣವೇ ಬಾವಿಯ ಮಾಲೀಕರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ರಕ್ಷಣೆ ಮಾಡಿದರು.
ಇದನ್ನೂ ಓದಿ:ಹೊಲದಲ್ಲಿ ಜೀವಂತ ಶಿಶು ಹೂತು ಹೋದ ಹೃದಯಹೀನರು: ರಕ್ಷಿಸಿ ಜೀವ ಉಳಿಸಿದ ರೈತ
ಪ್ರಾಥಮಿಕ ಮಾಹಿತಿ ಪ್ರಕಾರ, ಮದುವೆಯಾಗದ ಮಹಿಳೆ ನವಜಾತ ಶಿಶುವನ್ನು ಬಾವಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಪರಿಚಿತ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಗು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಸ್ಪತ್ರೆಗೂ ಭೇಟಿ ನೀಡಿ, ವೈದ್ಯರೊಂದಿಗೆ ಸಮಾಲೋಚಿಸಿ ಮಗುವಿನ ಆರೋಗ್ಯದ ಬಗೆಗೂ ಮಾಹಿತಿ ಕಲೆ ಹಾಕಿದರು.
ನಿನ್ನೆ ಗುಜರಾತ್ನ ಸಬರಕಾಂತ್ ಜಿಲ್ಲೆಯಲ್ಲಿ ಜೀವಂತ ಶಿಶುವನ್ನೇ ಹೊಲದಲ್ಲಿ ಹೂತಿರುವ ಅಮಾನವೀಯ ಘಟನೆ ನಡೆದಿತ್ತು. ಅದೃಷ್ಟವಶಾತ್ ಶಿಶು ಹೊಲದ ಮಾಲೀಕರ ಕಣ್ಣಿಗೆ ಬಿದ್ದು ಬದುಕುಳಿದಿದೆ.