ನವದೆಹಲಿ: ಮುಂದಿನ ವಾರ ಸಂಸತ್ತಿನ ವಿಶೇಷ ಅಧಿವೇಶನವು ಇದೇ ಮೊದಲ ಬಾರಿಗೆ ಹೊಸ ಸಂಸತ್ ಕಟ್ಟಡದಲ್ಲಿ ನಡೆಯಲಿದೆ. ಹೊಸ ಕಟ್ಟಡದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸಂಸತ್ ಸಿಬ್ಬಂದಿ ಹೊಸ ವಿನ್ಯಾಸದ ಸಮವಸ್ತ್ರ ಧರಿಸಲಿರುವುದು ವಿಶೇಷವಾಗಿದೆ. ವೇಷಭೂಷಣಗಳನ್ನು ಬದಲಾಯಿಸುವುದರ ಜೊತೆಗೆ ಸರ್ಕಾರವು ನೌಕರರಿಗೆ ಅವರ ನಡವಳಿಕೆಯಲ್ಲಿ ಬದಲಾವಣೆ ತರಲು ಕಮಾಂಡೋ ತರಬೇತಿ ಕೂಡ ನೀಡುತ್ತಿದೆ.
ಎನ್ಐಎಫ್ಟಿಯಿಂದ ಹೊಸ ಸಮವಸ್ತ್ರದ ವಿನ್ಯಾಸ:ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್ಐಎಫ್ಟಿ) ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಿದೆ. ಈಗಿರುವ 'ಬಂದ್ಗಲಾ' ಸೂಟ್ ಬದಲಾಗಿ ಮೆಜೆಂಟಾ ಬಣ್ಣದ ನೆಹರೂ ಜಾಕೆಟ್ ಅನ್ನು ಸಿಬ್ಬಂದಿ ಧರಿಸಲಿದ್ದಾರೆ. ಕಮಲದ ಹೂವಿನ ಚಿತ್ರಗಳಿರುವ ಗಾಢ ಗುಲಾಬಿ ವರ್ಣದ ಶರ್ಟ್ ಮತ್ತು ಖಾಕಿ ಬಣ್ಣದ ಟ್ರೌಸರ್ಗಳಲ್ಲಿ ಸಿಬ್ಬಂದಿ ಮಿಂಚಲಿದ್ದಾರೆ. ಸ್ಪೀಕರ್ ಮುಂದೆ ಕುಳಿತಿರುವ ನೌಕರರು ಇದೇ ವಿನ್ಯಾಸದ ಉಡುಪು ಧರಿಸಲಿದ್ದಾರೆ.
ಅಲ್ಲದೆ, ರಾಜ್ಯಸಭೆ ಮತ್ತು ಲೋಕಸಭೆಯ ಮಾರ್ಷಲ್ಗಳ ಸಮವಸ್ತ್ರವನ್ನು ಕೂಡ ಬದಲಾಯಿಸಲಾಗಿದೆ. ಗಾಢ ಗುಲಾಬಿ ಬಣ್ಣದ ಕಮಲದ ಹೂವಿನ ವಿನ್ಯಾಸದ ಶರ್ಟ್ ಮತ್ತು ಖಾಕಿ ಪ್ಯಾಂಟ್ಗಳ ಜೊತೆಗೆ ಮಾರ್ಷಲ್ಗಳು ಮಣಿಪುರಿ ಪೇಟಗಳನ್ನು ಧರಿಸಲಿದ್ದಾರೆ. ಭದ್ರತಾ ಸಿಬ್ಬಂದಿ ಮೊದಲು ಧರಿಸುತ್ತಿದ್ದ ಸೂಟ್ ಗಳ ಬದಲಿಗೆ ಸೇನಾ ಮಾದರಿಯ ಸಮವಸ್ತ್ರವನ್ನು ಧರಿಸಲಿದ್ದಾರೆ.
ಸಮವಸ್ತ್ರಕ್ಕೆ ಪ್ರತಿಪಕ್ಷಗಳ ವಿರೋಧ:ಹೊಸ ಸಮವಸ್ತ್ರದ ಬಗ್ಗೆ ಈಗಾಗಲೇ ವಿರೋಧ ಪಕ್ಷದ ಹಲವಾರು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಶೀದ್ ಕಿದ್ವಾಯಿ, ಸರ್ಕಾರ ತನ್ನ ಹಿಡನ್ ಅಜೆಂಡಾದ ಅಂಗವಾಗಿ ಸಮವಸ್ತ್ರವನ್ನು ಬದಲಾಯಿಸಿದೆ ಎಂದು ಆರೋಪಿಸಿದರು. "ಸಮವಸ್ತ್ರದಲ್ಲಿ ಕಮಲದ ಹೂವಿನ ವಿನ್ಯಾಸ ಏಕಿದೆ? ಬಿಜೆಪಿ ಸರ್ಕಾರ ಇಡೀ ದೇಶವನ್ನು ಕೇಸರಿಮಯಗೊಳಿಸಲು ಬಯಸುತ್ತದೆಯೇ?" ಎಂದು ಕಿದ್ವಾಯಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ಜೆಡಿ ನಾಯಕ ಮನೋಜ್ ಝಾ, ಪ್ರಾತಿನಿಧಿಕ ಪ್ರಜಾಪ್ರಭುತ್ವವದ ಸಂಕೇತ ಎಂದು ಪರಿಗಣಿಸಲಾದ ಸಂಸತ್ತಿನಲ್ಲಿ ಕೇಂದ್ರವು ಕೇಸರೀಕರಣ ಮತ್ತು ಅಜೆಂಡಾ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. "ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ತಮ್ಮ ಪಕ್ಷದ ಉಡುಪನ್ನು ಧರಿಸುವಂತೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಅವರು ಹೇಳಿದರು. ಏತನ್ಮಧ್ಯೆ ಸರ್ಕಾರವು ಸಂಸತ್ ಭವನದ ಸಿಬ್ಬಂದಿಗೆ ಕಮಾಂಡೋ ತರಬೇತಿಯನ್ನು ಸಹ ನೀಡುತ್ತಿದ್ದು, ತಮ್ಮ ನಡವಳಿಕೆಗಳ ಬಗ್ಗೆ ಜಾಗರೂಕರಾಗಿರಲು ತಿಳಿಸಲಾಗಿದೆ. ಹೊಸ ಸಂಸತ್ ಕಟ್ಟಡದ ಬಗ್ಗೆ ಸಂಪೂರ್ಣವಾಗಿ ಪರಿಚಿತರಾಗುವಂತೆ ಅವರಿಗೆ ತರಬೇತಿ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪೂಜೆಯ ನಂತರ ಹೊಸ ಸಂಸತ್ ಕಟ್ಟಡಕ್ಕೆ ಔಪಚಾರಿಕ ಪ್ರವೇಶ ಮಾಡಲಾಗುವುದು. ಸೆಪ್ಟೆಂಬರ್ 18 ರಂದು ಕರೆಯಲಾಗಿರುವ ವಿಶೇಷ ಅಧಿವೇಶನವು ಆರಂಭದಲ್ಲಿ ಹಳೆಯ ಸಂಸತ್ತಿನ ಕಟ್ಟಡದಲ್ಲೇ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ :"ಏಕ್ ಭಾರತ್ ಶ್ರೇಷ್ಠ ಭಾರತ್" ಪರಿಕಲ್ಪನೆಯಲ್ಲಿ ನಿರ್ಮಾಣವಾದ ಸಂಸತ್ ಭವನ: ಭಾರತದ ಎಲ್ಲೆಡೆಗಳಿಂದ ಸೆಂಟ್ರಲ್ ವಿಸ್ಟಾಗೆ ಕಚ್ಚಾ ವಸ್ತುಗಳ ಬಳಕೆ..