ಅಸನ್ಸೋಲ್(ಪಶ್ಚಿಮ ಬಂಗಾಳ):ಅಸನ್ಸೋಲ್ ಇಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಸಿ ಹೊಸ ಮತ ಯಂತ್ರ(ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್)ವನ್ನು ತಯಾರಿಸಿದ್ದಾರೆ. ಈ ಮತ ಯಂತ್ರದಲ್ಲಿ ಆಧಾರ್ ಲಿಂಕ್ ಮಾಡಲಾಗುವುದು. ಇದರ ಪರಿಣಾಮವಾಗಿ ಸರಿಯಾದ ವ್ಯಕ್ತಿ ಮತ ಚಲಾಯಿಸಲು ಬಂದಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಅಲ್ಲದೇ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಲು ಸಾಧ್ಯವಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಮತ ಹಾಕಲು ಹೋದರೆ ಯಂತ್ರ ಕೆಲಸ ಮಾಡುವುದಿಲ್ಲ. ಬದಲಾಗಿ ಅಲಾರಂ ಸದ್ದು ಮಾಡಲಿದೆ.
ಅಸನ್ಸೋಲ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಅಭಿಷೇಕ್ ಬರ್ನ್ವಾಲ್, ಅನಿಕೇತ್ ಕುಮಾರ್ ಸಿಂಗ್, ಅನುಪ್ ಗರೈ, ಅರ್ಘ್ಯ ಸಾಧು ಮತ್ತು ಜಯಜಿತ್ ಮುಖೋಪಾಧ್ಯಾಯ ಪ್ರಾಯೋಗಿಕವಾಗಿ ಈ ಮಾದರಿಯನ್ನು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ಪೇಟೆಂಟ್‌ಗಾಗಿ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಸನ್ಸೋಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮಾದರಿ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಅಲ್ಲಿ ಇಂಜಿನಿಯರಿಂಗ್ ಕಾಲೇಜಿನ ಈ ಐವರು ವಿದ್ಯಾರ್ಥಿಗಳು ಹೊಸ ಆಧುನಿಕ ಮತಯಂತ್ರ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ.
ಮಾದರಿ ಹೀಗಿದೆ..ಈ ಸುಧಾರಿತ ಭದ್ರತೆಯ ಯಂತ್ರ ವಾಸ್ತವವಾಗಿ ಸುಧಾರಿತ ತಂತ್ರಜ್ಞಾನದಿಂದ ತಯಾರಿಸಿದ ಮತ ಯಂತ್ರವಾಗಿದೆ. ಅದರಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ. ಇದರಿಂದ ಯಂತ್ರವು ವ್ಯಕ್ತಿಯನ್ನು ಗುರುತಿಸುವ ವಿವಿಧ ವಿಧಾನಗಳನ್ನು ಹೊಂದಿದೆ. ಅಂದರೆ ಆಧಾರ್ ಕಾರ್ಡ್‌ನಲ್ಲಿರುವ ಬೆರಳಚ್ಚು ಅಥವಾ ಕಣ್ಣಿನ ರೆಟಿನಾ ಪತ್ತೆ ಇದರಲ್ಲಿ ಸೇರಿವೆ. ಆಧಾರ್ ಸಂಖ್ಯೆಯೊಂದಿಗೆ ಬೆರಳಚ್ಚು ಅಥವಾ ಕಣ್ಣಿನ ರೆಟಿನಾ ಹೊಂದಾಣಿಕೆಯಾದರೆ ಮಾತ್ರ ಒಬ್ಬ ವ್ಯಕ್ತಿ ಮತದಾನಕ್ಕೆ ಅರ್ಹನಾಗುತ್ತಾನೆ. ಅಂದರೆ ಇಲ್ಲಿ ಸರಿಯಾದ ವ್ಯಕ್ತಿ ಮಾತ್ರ ಮತ ಚಲಾಯಿಸಬಹುದು. ಅಷ್ಟೇ ಅಲ್ಲ, ಬೆರಳಚ್ಚು ಅಥವಾ ಅಕ್ಷಿಪಟಲ ಪತ್ತೆ ಕಾರ್ಯ ನಡೆದರೆ ಮತಯಂತ್ರ ಮತದಾನಕ್ಕೆ ಸಿದ್ಧವಾಗಲಿದೆ. ಮತದಾನದ ಬಳಿಕ ಮತ್ತೊಮ್ಮೆ ಬೆರಳಚ್ಚು ನೀಡಲು ಹೋದರೆ ಅಲಾರಂ ಸದ್ದು ಮಾಡಲಿದೆ. ಇದರಿಂದ ಒಬ್ಬ ವ್ಯಕ್ತಿ ಪದೇ ಪದೇ ಮತ ಚಲಾಯಿಸುವಂತಿಲ್ಲ.