ಲಖಿಂಪುರ್ ಖೇರಿ (ಉತ್ತರ ಪ್ರದೇಶ): ಅಕ್ಟೋಬರ್ 3 ರಂದು ನಾಲ್ವರು ರೈತರ ಸಾವಿಗೆ ಕಾರಣವಾಗಿದ್ದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಹೊಸದಾಗಿ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ತನಿಖೆ ಆರಂಭವಾಗಿದೆ.
New SIT team: ಐಪಿಎಸ್ ಅಧಿಕಾರಿಗಳಾದ ಎಸ್.ಬಿ. ಶಿರಾಡ್ಕರ್, ಪ್ರೀತಿಂದರ್ ಸಿಂಗ್, ಪದ್ಮಜಾ ಚೌಹಾಣ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಾಕೇಶ್ ಕುಮಾರ್ ಜೈನ್ ಅವರನ್ನೊಳಗೊಂಡ ತಂಡವನ್ನು ನ್ಯಾಯಾಲಯ ರಚಿಸಿದೆ. ಈ ತಂಡದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದ್ದು, ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದ ಟಿಕುನಿಯಾ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಎಸ್‌ಐಟಿ ತಂಡವು ಹಿಂಸಾಚಾರದ ಸ್ಥಳವನ್ನು ಪರಿಶೀಲನೆ ನಡೆಸಿ ಈ ಪ್ರದೇಶದ ನಕ್ಷೆಯನ್ನು ಸಿದ್ಧಪಡಿಸಿದೆ. ಅ. 3 ರಂದು ರೈತರು ಪ್ರತಿಭಟನೆಗಾಗಿ ಸೇರಿದ್ದ ಅಗ್ರಸೇನ್ ಇಂಟರ್ ಕಾಲೇಜಿಗೂ ತಂಡವು ಭೇಟಿ ನೀಡಿದೆ. ಬಳಿಕ ಎಸ್‌ಐಟಿ ಹಿಂಸಾಚಾರದ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿರುವ ಬನ್ಬೀರ್‌ಪುರ ಗ್ರಾಮಕ್ಕೆ ತೆರಳಿದೆ.
ಡಿಐಜಿ, ಎಸ್‌ಐಟಿಯ ಮಾಜಿ ಮುಖ್ಯಸ್ಥರೊಂದಿಗೆ ಸಭೆ
ಬಳಿಕ ನಿನ್ನೆ ಸಂಜೆ ಡಿಐಜಿ ಮತ್ತು ಎಸ್‌ಐಟಿಯ ಮಾಜಿ ಮುಖ್ಯಸ್ಥ ಉಪೇಂದ್ರ ಅಗರ್‌ವಾಲ್ ಸೇರಿದಂತೆ ಇತರ ಎಲ್ಲ ಎಸ್‌ಐಟಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ಆದರೆ, ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಪುನಾರಚನೆ ಮಾಡಿರುವ ಎಸ್‌ಐಟಿಯನ್ನು ಈಗ 1993 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶಿರಾಡ್ಕರ್ ಅವರು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಲಖನೌದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿ)ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರೀತೀಂದರ್ ಸಿಂಗ್ ಅವರು ಪಂಜಾಬ್ ಕೇಡರ್‌ನ 2004 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಸಹರಾನ್‌ಪುರ ವ್ಯಾಪ್ತಿಯಲ್ಲಿ ಡಿಐಜಿಯಾಗಿದ್ದಾರೆ. ಪದ್ಮಜಾ ಚೌಹಾಣ್ 1998ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ನೇಮಕಾತಿ ಮಂಡಳಿಯಲ್ಲಿ ಐಜಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ಪುತ್ರ ಆಶಿಶ್ ಅವರ ಬೆಂಗಾವಲು ಪಡೆ ವಾಹನಗಳು ರೈತರ ಪ್ರತಿಭಟನಾ ಮೆರವಣಿಗೆ ಮೇಲೆ ಹರಿದ ಪರಿಣಾಮ ನಾಲ್ವರು ರೈತರು ಮತ್ತು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:Lakhimpur violence: ಮಿಶ್ರಾ ಸಚಿವ ಸ್ಥಾನದಲ್ಲಿ ಇರುವ ತನಕ ನ್ಯಾಯಯುತ ತನಿಖೆ ಸಾಧ್ಯವಿಲ್ಲ- ಕೈ ನಾಯಕ