ನವದೆಹಲಿ:ಹನಿಟ್ರ್ಯಾಪಿಂಗ್, ದೇಶದ, ಸೇನೆಯ ಸೂಕ್ಷ್ಮ ವಿಚಾರಗಳ ಹಂಚಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಂದ್ರ ಪೊಲೀಸ್ ಪಡೆಗಳಿಗೆ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ಕೆಲ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಆನ್ಲೈನ್ ಬಳಕೆ, ರೀಲ್ಸ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಕೇಂದ್ರ ಪೊಲೀಸ್ ಪಡೆಗಳಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳ ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಕೆಲಸ ಮಾಡುವ ಸ್ಥಳಗಳಲ್ಲಿಯೇ ಸಮವಸ್ತ್ರದ ಮೇಲೆಯೇ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಅದರ ಬಳಕೆಯ ಮೇಲೆ ಹೊಸ ನಿಯಮಗಳನ್ನು ಜಾರಿ ಮಾಡಿದೆ.
ಸಿಬ್ಬಂದಿ ಸಮವಸ್ತ್ರದಲ್ಲಿ ವಿಡಿಯೋ ಮಾಡುವುದು, ಸೂಕ್ಷ್ಮ ಸ್ಥಳಗಳಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಸ್ನೇಹತರಿಗೆ ರಿಕ್ವೆಸ್ಟ್ ಕಳುಹಿಸುವುದನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ಹಲವು ನಿಯಮಗಳುಳ್ಳ ಮಾರ್ಗಸೂಚಿಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಕೇಂದ್ರ ಅರೆಸೇನಾ ಪಡೆ ಮತ್ತು ಪೊಲೀಸ್ ಪಡೆಗಳಿಗೆ ಪತ್ರದ ಮೂಲಕ ರವಾನಿಸಲಾಗಿದೆ.
ರೀಲ್ಸ್ ಮಾಡದಂತೆ ಪೊಲೀಸರಿಗೆ ಸೂಚನೆ:ಸಿಆರ್ಪಿಎಫ್, ಬಿಎಸ್ಎಫ್, ಐಟಿಪಿಬಿ ಪೊಲೀಸರು ತಮ್ಮ ಕೆಲಸದ ಸ್ಥಳಗಳಲ್ಲಿ ರೀಲ್ಸ್ ಮಾಡುವಂತಿಲ್ಲ. ಸಮವಸ್ತ್ರದಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಆನ್‌ಲೈನ್‌ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ರಿಕ್ವೆಸ್ಟ್ ಕಳುಹಿಸುವ ಮತ್ತು ಸ್ವೀಕರಿಸುವ ಹಾಗಿಲ್ಲ ಎಂದು ಕರಾರು ಹಾಕಿದೆ.