ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರಿಂದು ಭವ್ಯ ಸಂಸತ್ ಭವನವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸರ್ವ ಧರ್ಮಗಳ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ, ಕೇಂದ್ರ ಸಚಿವ ಹೆಚ್.ಎಸ್.ಪುರಿ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಮತ್ತು ವಿವಿಧ ಧಾರ್ಮಿಕ ಮುಖಂಡರು ಸೇರಿದಂತೆ ಕೇಂದ್ರ ಸಚಿವರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.
ಸರ್ವಧರ್ಮ ಪ್ರಾರ್ಥನೆಯಲ್ಲಿ ಧಾರ್ಮಿಕ ಮುಖಂಡರು ವಿವಿಧ ಭಾಷೆಗಳಲ್ಲಿ ಪ್ರಾರ್ಥಿಸಿದರು. ವೈದಿಕ ವಿಧಿವಿಧಾನಗಳೊಂದಿಗೆ ನಡೆದ ಸಾಂಪ್ರದಾಯಿಕ ಪೂಜೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಒಂದು ಗಂಟೆ ಈ ಕಾರ್ಯಕ್ರಮ ಮುಂದುವರಿಯಿತು. ನೂತನ ಸಂಸತ್ ಭವನದ ಉದ್ಘಾಟನೆಗೆ ಮೊದಲು ಪ್ರಧಾನಿ ಮೋದಿ ಗಣಪತಿ ಹೋಮದಲ್ಲಿ ಪಾಲ್ಗೊಂಡರು.
ಎರಡು ಹಂತಗಳಲ್ಲಿ ಸಂಸತ್ ಭವನದ ಉದ್ಘಾಟನೆ ನಡೆಯುತ್ತಿದೆ. ಮೊದಲು ಗಾಂಧಿ ಪ್ರತಿಮೆ ಬಳಿಯ ಮೇಲಾವರಣದಲ್ಲಿ ಪೂಜೆ ನೆರವೇರಿತು. ಬಳಿಕ ಹೊಸ ಕಟ್ಟಡದಲ್ಲಿ ಲೋಕಸಭಾ ಸ್ಪೀಕರ್ ಕುರ್ಚಿಯ ಬಳಿ ಐತಿಹಾಸಿಕ ಸೆಂಗೋಲ್ ರಾಜದಂಡವನ್ನು ಪ್ರಧಾನಿ ಮೋದಿ ಸ್ಥಾಪಿಸಿದರು. ಓಂ ಬಿರ್ಲಾ, ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್.ಜೈಶಂಕರ್ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತರಿದ್ದರು.