ನವದೆಹಲಿ:ಭಾರತದ ರಾಜಕೀಯ ಇತಿಹಾಸದಲ್ಲಿ ಹಲವು ಕ್ಷಣಗಳು ಇಂದು ದಾಖಲಾಗಲಿವೆ. ತಲೆಎತ್ತಿ ನಿಂತಿರುವ ಹೊಸ ಸಂಸತ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕಾಂಗ್ರೆಸ್, ಟಿಎಂಸಿ, ಆಪ್ ಸೇರಿದಂತೆ ಕೆಲ ವಿಪಕ್ಷಗಳ ವಿರೋಧ ಮತ್ತು ಬಹಿಷ್ಕಾರದ ನಡುವೆ ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 7.15 ರಿಂದ ಪೂಜೆ, ಹವನದ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಹೀಗಾಗಿ ದೆಹಲಿಯಲ್ಲಿ ಬಿಗಿಭದ್ರತೆ ಹಾಕಲಾಗಿದೆ.
ಹೊಸ ಸಂಸತ್ ಭವನ ಉದ್ಘಾಟನೆ ಸಮಾರಂಭ ಬೆಳಿಗ್ಗೆ 7 ಗಂಟೆಗೆ ಹೊಸ ಕಟ್ಟಡದ ಹೊರಗೆ ಪೂಜೆ, ಹವನ, ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿದೆ. ತಮಿಳುನಾಡಿನ ಅಧೀನಂಗಳಿಂದ ಪಡೆದುಕೊಂಡಿರುವ ರಾಜದಂಡ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಅವರು ನೂತನ ಸಂಸತ್ ಭವನದ ಸ್ಪೀಕರ್ ಪೀಠದ ಬಳಿ ಅಳವಡಿಸಲಿದ್ದಾರೆ. ಬಳಿಕ ಅವರು 'ಪ್ರಜಾಪ್ರಭುತ್ವದ ನೂತನ ದೇಗುಲ'ವನ್ನು ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸೇರಿದಂತೆ, 25 ಪಕ್ಷಗಳ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳು ಮತ್ತು ಸಚಿವರು, ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊಸ ಸಂಸತ್ ಭವನದ ವಿಶೇಷತೆಗಳು:ಪ್ರಜಾಪ್ರಭುತ್ವದ ಹೊಸ ದೇಗುಲ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನಲ್ಲಿ ನಿರ್ಮಿಸಲಾಗಿದೆ. ಸಂಸತ್ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಜ್ಞಾನ, ಶಕ್ತಿ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ.
ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರ ಆಸನಗಳನ್ನು ಅಳವಡಿಸಲಾಗಿದೆ. ಉಭಯ ಸದನಗಳ ಜಂಟಿ ಅಧಿವೇಶನ ಲೋಕಸಭೆಯಲ್ಲೇ ನಡೆಯಲಿದ್ದು, ಅಂತಹ ಸಂದರ್ಭದಲ್ಲಿ 1280 ಸದಸ್ಯರಿಗಾಗಿ ಆಸನ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ.
ಹೊಸ ಸಂಸತ್ ಕಟ್ಟಡ 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ಹಳೆಯ ಸಂಸತ್ತಿನ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದೆ. 2020 ರ ಡಿಸೆಂಬರ್ 10 ರಂದು ಪ್ರಧಾನಿ ಮೋದಿ ಅವರು ಇದರ ಆರಂಭಕ್ಕೆ ಶಂಕುಸ್ಥಾಪನೆ ಮಾಡಿದ್ದರು. 1200 ಕೋಟಿ ರೂಪಾಯಿ ವೆಚ್ಚದಲ್ಲಿ ಕೇವಲ ಎರಡೂವರೆ ವರ್ಷದಲ್ಲಿ ಇದನ್ನು ನಿರ್ಮಾಣ ಮಾಡಿ ದಾಖಲೆ ಬರೆಯಲಾಗಿದೆ.
ಇದರಲ್ಲಿನ ಲೋಕಸಭೆ ಹಳೆಯದಕ್ಕಿಂತ ಮೂರು ಪಟ್ಟು ಹಿರಿದಾಗಿದೆ. 17 ಸಾವಿರ ಚದರ ಮೀಟರ್ ದೊಡ್ಡದು. ಲೋಕಸಭೆಯನ್ನು ರಾಷ್ಟ್ರಪಕ್ಷಿ ನವಿಲನ ಆಕಾರದಲ್ಲಿ ರೂಪಿಸಲಾಗಿದೆ. ರಾಜ್ಯಸಭೆಯನ್ನು ರಾಷ್ಟ್ರಪುಷ್ಪ ಕಮಲದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಂಸತ್ತಿನ ಮೇಲೆ 6.5 ಮೀಟರ್ ಎತ್ತರದ ನಾಲ್ಕು ಮುಖಗಳ ಸಿಂಹದ ರಾಷ್ಟ್ರಲಾಂಛನವನ್ನು ಇಡಲಾಗಿದೆ. ಇದು 9500 ಕೇಜಿ ತೂಕವಿದೆ. ಇದನ್ನು ಹೊತ್ತಿರುವ ಕೆಳಗಿನ ಭಾಗವೇ 6500 ಕೆಜಿ ತೂಕವಿದೆ.
ಹೈಟೆಕ್ ಸಂಸತ್ತು:ನೂತನ ಸಂಸತ್ ಆಧುನೀಕರಣಗೊಂಡಿದೆ. ಸರ್ಕಾರದ ಆಶಯದಂತೆ ಕಾಗದ ರಹಿತವಾಗಿ ಕಾರ್ಯನಿರ್ವಹಣೆ ಮಾಡುವಂತೆ ರೂಪಿಸಲಾಗಿದೆ. ಎಲ್ಲಾ ಆಸನಗಳ ಬಳಿ ಮಲ್ಟಿಮೀಡಿಯಾ ಡಿಸ್ಪ್ಲೇಗಳನ್ನು ಅಳವಡಿಸಲಾಗಿದೆ. ಆಧುನಿಕ ಗ್ಯಾಜೆಟ್ಗಳು ಇಲ್ಲಿದ್ದು, ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಕೃತಕಬುದ್ಧಿಮತ್ತೆಯ(ಎಐ) ನೆರವಿನಿಂದ ಭಾಷಾಂತರ ಮಾಡುವ ವ್ಯವಸ್ಥೆಯನ್ನು ಹೊಂದಲಾಗಿದೆ.
ತೆರೆಮರೆಗೆ ಸರಿಯಲಿರುವ ಹಳೆಯ ಸಂಸತ್:ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ಹಳೆಯ ಸಂಸತ್ ಇನ್ನು ತೆರೆಮರೆಗೆ ಸರಿಯಲಿದೆ. ಜಗತ್ತಿನ ಅತ್ಯುತ್ಕೃಷ್ಟ ವಾಸ್ತುಶಿಲ್ಪವನ್ನು ಹೊಂದಿರುವ ಭವನವನ್ನು ಇಡೀ ಜಗತ್ತೇ ಕೊಂಡಾಡಿದೆ. 1927 ರಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, 96 ವರ್ಷ ಹಳೆಯದಾಗಿದೆ. ಇದು ಇತ್ತೀಚೆಗೆ ಸೋರಲು ಆರಂಭಿಸಿದ್ದು, ಬದಲಾವಣೆ ಬಗ್ಗೆ ಪ್ರಸ್ತಾಪ ಬಂದಿತ್ತು. ಇದನ್ನು ಇನ್ನು ಮುಂದೆ ವಸ್ತುಸಂಗ್ರಹಾಲಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಪೊಲೀಸ್ ಸರ್ಪಗಾವಲು:ಹೊಸ ಸಂಸತ್ ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ದೆಹಲಿ ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸಂಸತ್ ಕಟ್ಟಡ ಉದ್ಘಾಟನೆವರೆಗೂ ನವದೆಹಲಿ ಜಿಲ್ಲೆಯನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ. ವಾಹನಗಳ ಪ್ರವೇಶ, ಜನಸಂಚಾರವನ್ನು ನಿಯಂತ್ರಿಸಲಾಗಿದೆ. ಸಂಸತ್ ಭವನವು ಹೆಚ್ಚಿನ ಭದ್ರತಾ ಪ್ರದೇಶದಲ್ಲಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆಯ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 20 ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದರೆ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಹೊಸ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.