ನವದೆಹಲಿ: ಡ್ರೋನ್ ನಿಯಮ-2021ರ ಅಡಿಯಲ್ಲಿ ದೇಶದಲ್ಲಿ ಡ್ರೋನ್ ಬಳಕೆಗೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಹೊರಡಿಸಿದ್ದು, ಈ ಮೊದಲಿದ್ದ ಕೆಲ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಇದರಂತೆ, ಡ್ರೋನ್‌ಗಳ ಕಾರ್ಯಾಚರಣೆಗೆ ನೋಂದಣಿ ಮಾಡಿಕೊಳ್ಳಲು ಅಥವಾ ಪರವಾನಗಿ ಪಡೆಯಲು ಇನ್ಮುಂದೆ ಯಾವುದೇ ಭದ್ರತಾ ಅನುಮತಿ ಪತ್ರದ ಅಗತ್ಯವಿಲ್ಲ. ಡ್ರೋನ್‌ಗಳನ್ನು ನಿರ್ವಹಿಸಲು ಕಟ್ಟಬೇಕಿದ್ದ ಅನುಮತಿಗಳ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ.
ಕಳೆದ ಜುಲೈ 16ರಂದು ನಾಗರಿಕ ವಿಮಾನಯಾನ ಸಚಿವಾಲಯವು ಡ್ರೋನ್ ಕರಡು ನಿಯಮ-2021ಅನ್ನು ಬಿಡುಗಡೆ ಮಾಡಿತ್ತು. ಇದನ್ನು ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ಕೂಡ ಸ್ವಾಗತಿಸಿದ್ದು, ಇದೀಗ ಈ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಧಾನಿ ಸ್ವಾಗತ
ಹೊಸ ಡ್ರೋನ್ ನಿಯಮಗಳು ಭಾರತದಲ್ಲಿ 'ಸ್ಟಾರ್ಟ್ ಅಪ್' ವಲಯದ ಮಹತ್ವದ ಕ್ಷಣಕ್ಕೆ ನಾಂದಿ ಹಾಡುತ್ತವೆ. ಸ್ಟಾರ್ಟ್ ಅಪ್ ವಲಯದಲ್ಲಿ ಕೆಲಸ ಮಾಡುವ ಯುವಕರಿಗೆ ಸಹಕಾರಿಯಾಗಲಿದೆ. ಇದು ನಾವೀನ್ಯತೆ ಮತ್ತು ವ್ಯಾಪಾರಕ್ಕಾಗಿ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ. ಆವಿಷ್ಕಾರ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸಲು ನಮ್ಮ ದೇಶವನ್ನು 'ಡ್ರೋನ್ ಹಬ್' ಆಗಿ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಹೊಸ ಹೊಸ ಡ್ರೋನ್ ನಿಯಮಗಳನ್ನು ಸ್ವಾಗತಿಸಿದ್ದಾರೆ.
ಹೊಸ ಡ್ರೋನ್ ನಿಯಮಗಳು ಹಾಗೂ ರದ್ದುಗೊಂಡ ನಿಯಮಗಳು ಇಲ್ಲಿವೆ..
1.ಸರಕು ವಿತರಣೆಗಾಗಿ ಡ್ರೋನ್ ಕಾರಿಡಾರ್‌ಗಳ ಅಭಿವೃದ್ಧಿಪಡಿಸಲಾಗುವುದು. ಹೀಗಾಗಿ ಡ್ರೋನ್‌ಗಳ ತೂಕವನ್ನು 300 ರಿಂದ 500 ಕೆ.ಜಿಗೆ ಏರಿಕೆ ಮಾಡಲಾಗಿದೆ.
2. ಡ್ರೋನ್ ನಿಯಮ ಉಲ್ಲಂಘನೆಗಿದ್ದ ಗರಿಷ್ಠ ದಂಡವನ್ನು ಒಂದು ಲಕ್ಷ ರೂಪಾಯಿಗೆ ಇಳಿಸಲಾಗಿದೆ.
3.ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಹಸಿರು, ಹಳದಿ ಮತ್ತು ಕೆಂಪು ವಲಯಗಳ ವಾಯುಪ್ರದೇಶದ ನಕ್ಷೆಯನ್ನು ಪ್ರದರ್ಶಿಸಲಾಗುತ್ತದೆ. ಈ ಮೊದಲು ವಿಮಾನ ನಿಲ್ದಾಣದ ಪರಿಧಿಯಿಂದ 45 ಕಿ.ಮೀ ವರೆಗಿನ ಪ್ರದೇಶವನ್ನು 'ಹಳದಿ ವಲಯ' ಎಂದು ಹೇಳಲಾಗಿತ್ತು. ಆದರೆ ಈಗ ಈ ಅಂತರವನ್ನು 45 ಕಿ.ಮೀ ನಿಂದ 12 ಕಿ.ಮೀಗೆ ಇಳಿಸಲಾಗಿದೆ. ವಿಮಾನ ನಿಲ್ದಾಣದ ಪರಿಧಿಯಿಂದ 8 ರಿಂದ 12 ಕಿಮೀ ನಡುವಿನ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಲು ಯಾವುದೇ ಅನುಮತಿಯ ಅಗತ್ಯವಿಲ್ಲ.