ನವದೆಹಲಿ :ಜಿ 20 ನಾಯಕರು ಅಂಗೀಕರಿಸಿದ ನವದೆಹಲಿ ಘೋಷಣೆಗಾಗಿ ನಡೆದ ಮಾತುಕತೆಗಳ ಮಧ್ಯೆ ತೊಡಕುಗಳು ಬಂದರೂ, ಘೋಷಣೆಯು ನಮ್ಮ ಚರ್ಚೆಗಳಿಗೆ ಅನುಗುಣವಾಗಿತ್ತು ಎಂದು ಮಾತುಕತೆಗಳ ಬಗ್ಗೆ ಮಾಹಿತಿ ಇರುವ ಯುರೋಪಿಯನ್ ಯೂನಿಯನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘೋಷಣೆಯಲ್ಲಿನ ಪಠ್ಯದ ಬಗ್ಗೆ ಇಯು ತೃಪ್ತವಾಗಿದೆ ಎಂದು ಅಧಿಕಾರಿ ಹೇಳಿದರು. ಈ ನಿಟ್ಟಿನಲ್ಲಿ ಭಾರತೀಯ ನಾಯಕತ್ವವು ಅದ್ಭುತವಾಗಿ ಕೆಲಸ ಮಾಡಿದೆ ಎಂದ ಅವರು, ನವದೆಹಲಿ ಘೋಷಣೆಯು ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸಲು ಮೊದಲ ಮೆಟ್ಟಿಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಕ್ರೇನ್ನಲ್ಲಿ ನ್ಯಾಯಸಮ್ಮತವಾದ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಿ 20 ದೇಶಗಳು ಒಗ್ಗಟ್ಟಾಗಿವೆ ಎಂದು ಹೇಳುವ ನವದೆಹಲಿ ಘೋಷಣೆಯ ದಾಖಲೆಯು ಭವಿಷ್ಯದಲ್ಲಿ ಮುಂದೆ ಸಾಗಲು ಸಹಾಯ ಮಾಡಲಿದೆ ಎಂದು ಅಧಿಕಾರಿ ಹೇಳಿದರು.
ಶನಿವಾರ ಅಂಗೀಕರಿಸಲಾದ ನವದೆಹಲಿ ಘೋಷಣೆಯು ಹೀಗಿದೆ- "ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧದ ಪ್ರತಿಕೂಲ ಪರಿಣಾಮವನ್ನು ಪರಿಹರಿಸುವ ನಮ್ಮ ಪ್ರಯತ್ನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಉಕ್ರೇನ್ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಬೆಂಬಲಿಸುವ ಎಲ್ಲ ರಚನಾತ್ಮಕ ಉಪಕ್ರಮಗಳನ್ನು ಸ್ವಾಗತಿಸುತ್ತೇವೆ. ಅದು ಶಾಂತಿಯನ್ನು ಉತ್ತೇಜಿಸಲು ಯುಎನ್ ಚಾರ್ಟರ್ನ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಮನೋಭಾವದಲ್ಲಿ ರಾಷ್ಟ್ರಗಳ ನಡುವೆ ಸ್ನೇಹಪರ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳು, ಎಲ್ಲಾ ಉದ್ದೇಶಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತದೆ."