ಭೋಪಾಲ್, ಮಧ್ಯಪ್ರದೇಶ:ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನಟ್ಟು ಜಟಿಲವಾಗುತ್ತಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ತಪ್ಪಿಸುವ ಸಲುವಾಗಿ ಶಾಸಕರಿಂದ ಒತ್ತಡ ಕೇಳಿಬಂದಿದೆ. ಈ ಮಧ್ಯೆಯೇ ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕ ಕಮಲ್ನಾಥ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿರುವುದು ಇನ್ನೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
ಕಮಲ್ನಾಥ್ ಮೇಲೆ ಎಲ್ಲರ ಕಣ್ಣು:ಗಾಂಧಿ ಕುಟುಂಬಕ್ಕೆ ಆಪ್ತವಾಗಿರುವ ಕಮಲ್ ನಾಥ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರೀ ಒತ್ತಡದ ಮೇಲೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದರು. ಸಿಎಂ ಸ್ಥಾನವನ್ನು ಅವರ ಸಚಿನ್ ಪೈಲಟ್ ಅವರಿಗೆ ನೀಡುವ ಕುರಿತಾಗಿ ಮಾತುಗಳು ಕೇಳಿ ಬಂದ ತಕ್ಷಣವೇ 92 ಗೆಹ್ಲೋಟ್ ಬಣದ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಲು ಮುಂದಾಗಿದ್ದರು.
ಇದು ಕಾಂಗ್ರೆಸ್ ಹೈಕಮಾಂಡ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಸಂದಿಗ್ಧತೆಯನ್ನು ಕಳೆಯಲು ಸೋನಿಯಾ ಗಾಂಧಿ ಅವರು ಕಮಲ್ನಾಥ್ ಅವರನ್ನು ದೆಹಲಿಗೆ ಕರೆಯಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಸ್ಪರ್ಧಿಸುವಂತೆ ಹೈಕಮಾಂಡ್ ಅವರನ್ನು ಕೋರುವ ಸಾಧ್ಯತೆ ಇದೆ.