ಕರ್ನಾಟಕ

karnataka

ಹೊಸ ಅಪರಾಧ ಕಾನೂನು ಮಸೂದೆಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿವೆ: ಅಮಿತ್​ ಶಾ

By ETV Bharat Karnataka Team

Published : Dec 20, 2023, 5:28 PM IST

Amit Shah statement on new criminal law bills: ಸಂವಿಧಾನದ ಆಶಯದಂತೆ ಬ್ರಿಟಿಷರ ಕಾಲದ ಮೂರು ಅಪರಾಧ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ ಎಂದು ಲೋಕಸಭೆಗೆ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

New criminal law bills in consonance with spirit of Constitution: Amit Shah in Lok Sabha
ಹೊಸ ಕ್ರಿಮಿನಲ್ ಮಸೂದೆಗಳು ಜನಕೇಂದ್ರಿತ, ಗುಂಪು ಹಲ್ಲೆಯೂ ಅಪರಾಧ: ಲೋಕಸಭೆಯಲ್ಲಿ ಅಮಿತ್​ ಶಾ ಹೇಳಿಕೆ

ನವದೆಹಲಿ: ಹೊಸ ಕ್ರಿಮಿನಲ್ ಕಾನೂನು ಮಸೂದೆಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿವೆ. ದೇಶದ ಜನರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಗೆ ತಿಳಿಸಿದ್ದಾರೆ. ಸದನದಲ್ಲಿ ಮಂಡಿಸಲಾದ ಭಾರತೀಯ ನ್ಯಾಯ (ಎರಡನೇ) ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ)-2023 ಮಸೂದೆಗಳ ಕುರಿತು ಮಾತನಾಡಿದ ಶಾ, ಹೊಸ ಶಾಸನಗಳು ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಿಸಲಿವೆ ಎಂದು ಸ್ಪಷ್ಟಪಡಿಸಿದರು.

ಗುಂಪು ಹಲ್ಲೆಗಳು ಅಪರಾಧ: ''ಮೋದಿ ನಾಯಕತ್ವದಲ್ಲಿ ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಒತ್ತು ನೀಡುವ ಮಸೂದೆಗಳನ್ನು ನಾನು ತಂದಿದ್ದೇನೆ. ಸಂವಿಧಾನದ ಆಶಯದಂತೆ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ. ಜನರಿಗೆ ನ್ಯಾಯ ನೀಡುವಲ್ಲಿ ತಂತ್ರಜ್ಞಾನದ ಬಳಕೆಯನ್ನು ಈ ಮಸೂದೆಗಳು ಉತ್ತೇಜಿಸುತ್ತವೆ. ಗುಂಪು ಹಲ್ಲೆಗಳನ್ನೂ ಮಸೂದೆಗಳಲ್ಲಿ ಅಪರಾಧವೆಂದು ಸೇರಿಸಲಾಗಿದೆ'' ಎಂದು ಅಮಿತ್​ ಶಾ ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ''ಬ್ರಿಟಿಷರ ಕಾಲದ ಕಾನೂನುಗಳು ವಿದೇಶಿ ಆಡಳಿತವನ್ನು ರಕ್ಷಿಸುವ ಗುರಿ ಹೊಂದಿದ್ದವು. ಹೊಸ ಮಸೂದೆಗಳು ಜನಕೇಂದ್ರಿತವಾಗಿವೆ'' ಎಂದು ವಿವರಿಸಿದರು.

ಇದನ್ನೂ ಓದಿ:ಬ್ರಿಟಿಷರ ಕಾಲದ IPC, CrPC, Evidence Actಗೆ ಗುಡ್‌ಬೈ! ಲೋಕಸಭೆಯಲ್ಲಿ ಹೊಸ 3 ಮಸೂದೆ ಮಂಡಿಸಿದ ಅಮಿತ್​ ಶಾ

1860ರ ಭಾರತೀಯ ದಂಡ ಸಂಹಿತೆ (ಐಪಿಸಿ), 1973ರ ಕ್ರಿಮಿನಲ್ ಪ್ರಕ್ರಿಯ ಸಂಹಿತೆ (ಸಿಆರ್​ಪಿಸಿ) ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಗಳ ಬದಲಿಗೆ ಕೇಂದ್ರ ಮೂರು ಹೊಸ ಮಸೂದೆಗಳನ್ನು ರೂಪಿಸಿದೆ. ಈ ಮಸೂದೆಗಳನ್ನು ಕಳೆದ ವಾರ ಲೋಕಸಭೆಯಲ್ಲಿ ಗೃಹ ಸಚಿವರು ಮಂಡಿಸಿದ್ದು, ಮಂಗಳವಾರದಿಂದ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಹಿಂದೆ ಮಂಡಿಸಿದ್ದ ಮಸೂದೆಗಳು ವಾಪಸ್​: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಹಿಂದಿನ ಐಪಿಸಿ, ಸಿಆರ್​ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳ ಬದಲಿಸುವ ಈ ಮೂರು ಹೊಸ ಮಸೂದೆಗಳನ್ನು ಮೊದಲಿಗೆ ಆಗಸ್ಟ್ 11ರಂದು ಅಮಿತ್​ ಶಾ ಮಂಡಿಸಿದ್ದರು. ಆದರೆ, ಇವುಗಳನ್ನು ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು. ಕರಡು ವರದಿಗೆ ಸಮಿತಿ ತಡೆ ನಿಂತಿತ್ತು. ಇದೀಗ ಅಂದು ಮಂಡಿಸಿದ್ದ ಮೂರು ಮಸೂದೆಗಳನ್ನು ಗೃಹ ಸಚಿವರು ಹಿಂಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಕೆಲವು ಬದಲಾವಣೆಗಳನ್ನು ಮಾಡಬೇಕಾಗಿರುವುದರಿಂದ ಈ ಹಿಂದೆ ಮಂಡಿಸಿದ್ದ ಮಸೂದೆಗಳನ್ನು ಹಿಂಪಡೆದು ಮೂರು ಹೊಸ ಬಿಲ್‌ಗಳನ್ನು ಪರಿಚಯಿಸಲಾಗಿದೆ. ಈ ಮಸೂದೆಗಳನ್ನು ಸ್ಥಾಯಿ ಸಮಿತಿ ಪರಿಶೀಲಿಸಿದ್ದು, ಅಧಿಕೃತ ತಿದ್ದುಪಡಿಗಳನ್ನು ತರುವ ಬದಲು ಮತ್ತೆ ಮಸೂದೆಗಳನ್ನು ತರಲು ನಿರ್ಧರಿಸಲಾಗಿದೆ'' ಎಂದು ಮಾಹಿತಿ ನೀಡಿದರು. (ಎಎನ್​ಐ)

ಇದನ್ನೂ ಓದಿ:ಹೊಸ ಕ್ರಿಮಿನಲ್​ ಕಾನೂನು ಮಸೂದೆಗಳ ಕರಡು ವರದಿಗೆ ಸಂಸದೀಯ ಸ್ಥಾಯಿ ಸಮಿತಿ ತಡೆ

ABOUT THE AUTHOR

...view details