ಜೋಶಿಮಠ (ಉತ್ತರಾಖಂಡ) : ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿದ್ದು ಹಲವಾರು ಮನೆಗಳು ಈಗಾಗಲೇ ಬಿರುಕು ಬಿಟ್ಟಿವೆ. ಇದರ ಮಧ್ಯೆ ಈಗ ಮತ್ತೊಂದು ಆತಂಕ ಶುರುವಾಗಿದೆ. ಬದ್ರಿನಾಥ ಹೆದ್ದಾರಿ ಕೂಡ ಅಲ್ಲಲ್ಲಿ ಬಿರುಕು ಬಿಟ್ಟು ಕುಸಿಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಲ್ಲಿ ಹೆದ್ದಾರಿಯಲ್ಲಿನ ಬಿರುಕುಗಳು ಅಗಲವಾಗುತ್ತ ಸಾಗಿವೆ. ಇನ್ನು ಜೋಶಿಮಠದಲ್ಲಿರುವ ಹಳೆಯ ಮನೆಗಳ ಗೋಡೆಗಳ ಬಿರುಕುಗಳು ದೊಡ್ಡದಾಗುತ್ತಿದ್ದು, ಹೊಸ ಮನೆಗಳು ಕೂಡ ಬಿರುಕು ಬಿಡಲಾರಂಭಿಸಿವೆ.
ಪ್ರಸ್ತುತ ದಿನಗಳಲ್ಲಿ ಬದ್ರಿನಾಥ ಹೆದ್ದಾರಿಯಲ್ಲಿ ವಾಹನ ಸಂಚಾರ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. ಬರುವ ಏಪ್ರಿಲ್ ತಿಂಗಳಿನಿಂದ ಬದ್ರಿನಾಥ ಯಾತ್ರೆ ಆರಂಭವಾಗಲಿದೆ. ಆಗ ಪ್ರತಿದಿನ ಸಾವಿರಾರು ಸಂಖ್ಯೆಯ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸಲಿವೆ. ಆದರೆ, ಬಿರುಕು ಬಿಟ್ಟ ಸ್ಥಳಗಳಲ್ಲಿ ಹೆದ್ದಾರಿಯು ವಾಹನಗಳ ಭಾರ ತಾಳಿಕೊಳ್ಳುವುದೇ ಎಂಬ ಪ್ರಶ್ನೆ ಈಗ ಎದುರಾಗಿದೆ.
ಜೋಶಿಮಠ ಪಟ್ಟಣದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತದಿಂದ ಬದರಿನಾಥ ಹೆದ್ದಾರಿ ಹಾಳಾಗಿದೆ. ಹೆದ್ದಾರಿಯಲ್ಲಿ ನಿರಂತರವಾಗಿ ಹೊಸ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಹಳೆಯ ಬಿರುಕುಗಳ ಅಗಲ ಹೆಚ್ಚುತ್ತಿದೆ. ಈ ಹಿಂದೆ ಮಣ್ಣು, ಕಲ್ಲು ತುಂಬಿಸಿ ಬಿರುಕುಗಳನ್ನು ತುಂಬಿಸುತ್ತಿದ್ದರು. ಆದರೆ, ಈಗ ಬಿರುಕುಗಳ ಅಗಲ ಹೆಚ್ಚಾಗಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಬದರಿನಾಥ್ ಹೆದ್ದಾರಿಯ ಮಾರ್ವಾಡಿ ಪ್ರದೇಶದಲ್ಲಿ ಅತ್ಯಧಿಕ ಭೂಕುಸಿತ ಸಂಭವಿಸಿದೆ. ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ರಸ್ತೆ ಹಾಳಾಗಿದೆ. ಜೆಪಿ ಕಾಲೋನಿ, ಮಾರ್ವಾಡಿ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕ್ಯಾಂಪ್ ಆಫೀಸ್ ನಡುವೆ ಸುಮಾರು 400 ಮೀಟರ್ ವ್ಯಾಪ್ತಿಯಲ್ಲಿ ಹೊಸ ಬಿರುಕುಗಳು ಕಾಣಿಸಿಕೊಂಡಿವೆ.