ಪಾಟ್ನಾ (ಬಿಹಾರ): ಬಿಹಾರದಲ್ಲಿ ಕೋವಿಡ್ ಸೋಂಕಿನ ಹೊಸ ತಳಿ ಬಿಎ.12ರ ಪ್ರಕರಣ ಪತ್ತೆಯಾಗಿದ್ದು, ಇದು ಒಮಿಕ್ರಾನ್ಗಿಂತ 10 ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಪಾಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸುಮಾರು ಎರಡು ತಿಂಗಳಿಂದ ನಡೆಯುತ್ತಿರುವ ಒಮಿಕ್ರಾನ್ ರೂಪಾಂತರದ 13 ಮಾದರಿಗಳ ಜೀನೋಮ್ ಪರೀಕ್ಷೆಯ ವೇಳೆ ಈ ರೂಪಾಂತರಿ ಸೋಂಕು ಪತ್ತೆಯಾಗಿದೆ.
ಸಂಭವನೀಯ ಹೊಸ ರೂಪಾಂತರಗಳ ಮೇಲೆ ಪತ್ತೆ ಹಚ್ಚಲು ಜೀನೋಮ್ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಎಕ್ಸ್ಇ ರೂಪಾಂತರಿ ಸೋಂಕು ಮತ್ತು ಬಿಎ.12 ರೂಪಾಂತರಿ ಸೋಂಕಿನ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಈಗಾಗಲೇ ಪ್ರಪಂಚದ ಅನೇಕ ಸ್ಥಳಗಳಲ್ಲಿ ಬಿಎ.12 ಪತ್ತೆಯಾಗಿದೆ. ಅಮೆರಿಕದಲ್ಲಿ ಈ ತಳಿ ಮೊದಲು ಕಾಣಿಸಿಕೊಂಡಿದ್ದು, ಇದು ಬಿಎ.1 ಮತ್ತು ಬಿಎ.2ಗಿಂತ ಬಿಎ.12 ತಳಿ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ನಮ್ರತಾ ಕುಮಾರಿ ಹೇಳಿದ್ದಾರೆ.