ನವದೆಹಲಿ:ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು(ಎನ್‌ಸಿಇಆರ್‌ಟಿ) 12 ನೇ ತರಗತಿಯ ಕೆಲ ಪಠ್ಯಕ್ರಮಗಳನ್ನು ತೆಗೆದು ಹಾಕಿತ್ತು. ಇದೀಗ 10 ನೇ ತರಗತಿಯಲ್ಲಿನ ಕೆಲ ಪಠ್ಯಕ್ರಮವನ್ನು ಕಡಿತ ಮಾಡುವ ನಿರ್ಧಾರ ಮಾಡಿದೆ. ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವ ಮತ್ತು ಇಂಧನ ಸಂಪನ್ಮೂಲಗಳ ಅಧ್ಯಾಯಗಳನ್ನು ಕೈಬಿಡಲು ಮುಂದಾಗಿದೆ. ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಸಿಇಆರ್‌ಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗಷ್ಟೇ 10ನೇ ತರಗತಿಯ ಪಠ್ಯಕ್ರಮದಿಂದ ಜೈವಿಕ ವಿಕಾಸದ ಸಿದ್ಧಾಂತವನ್ನು ಎನ್‌ಸಿಇಆರ್‌ಟಿ ತೆಗೆದು ಹಾಕಿತ್ತು. ಈಗ ಇನ್ನಷ್ಟು ವಿಷಯಗಳಿಗೆ ಕತ್ತರಿ ಹಾಕಿದೆ. ಪರಿಸರ ಸುಸ್ಥಿರತೆ, ಇಂಧನ ಸಂಪನ್ಮೂಲಗಳು, ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವಕ್ಕಿರುವ ಸವಾಲುಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಸಂಪೂರ್ಣ ಅಧ್ಯಾಯಗಳನ್ನು ಪಠ್ಯಕ್ರಮದಿಂದ ಕೈ ಬಿಡಲಾಗಿದೆ. ಕೊರೊನಾ ಸಾಂಕ್ರಾಮಿಕದ ಬಳಿಕ ವಿದ್ಯಾರ್ಥಿಗಳ ಮೇಲೆ ವಿಷಯದ ಭಾರ ಹೆಚ್ಚಾಗಿದೆ. ಹೀಗಾಗಿ ಕೆಲವನ್ನು ಕಡಿತ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.
ಜಿಆರ್‌ಇ ಪರೀಕ್ಷೆಯ ಅವಧಿ ಕಡಿತ:ಸೆಪ್ಟೆಂಬರ್ 2023 ರಲ್ಲಿ ನಡೆಯಲಿರುವ ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಯ (ಜಿಆರ್‌ಇ) ಸಮಯವನ್ನು 1 ಗಂಟೆ 58 ನಿಮಿಷಗಳಿಗೆ ಕಡಿಮೆ ಮಾಡಲಾಗಿದೆ ಎಂದು ಶೈಕ್ಷಣಿಕ ಪರೀಕ್ಷಾ ಸೇವೆ (ಇಟಿಎಸ್) ಗುರುವಾರ ಪ್ರಕಟಿಸಿದೆ. ಪರೀಕ್ಷೆ ಮುಗಿದ 10 ದಿನಗಳಲ್ಲಿ ಅಂಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಈ ಹಿಂದೆ ಜಿಆರ್‌ಇ ಪರೀಕ್ಷೆಯ ಸಮಯ 3 ಗಂಟೆ 45 ನಿಮಿಷವಾಗಿತ್ತು. ಅಲ್ಲದೆ, ಪ್ರಬಂಧ, ವರ್ಬಲ್ ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ರೀಸನಿಂಗ್ ವಿಭಾಗಗಳಲ್ಲಿನ ಪ್ರಶ್ನೆಗಳ ಸಂಖ್ಯೆಯನ್ನೂ ಇದೇ ವೇಳೆ ಕಡಿಮೆ ಮಾಡಲಾಗಿದೆ.