ನವದೆಹಲಿ:ಚೀನಾ ಎರಡು ದಿನಗಳ ಹಿಂದೆ ತನ್ನ ''ಸ್ಟ್ಯಾಂಡರ್ಡ್ ಮ್ಯಾಪ್'' ಬಿಡುಗಡೆಗೊಳಿಸಿದ್ದು, ಇದರಲ್ಲಿ ತೈವಾನ್ ಭೂಪ್ರದೇಶವನ್ನೂ ತನ್ನದೇ ಭಾಗ ಎಂದು ಚಿತ್ರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತೈವಾನ್, ಏಷ್ಯಾದ ದ್ವೀಪ ರಾಷ್ಟ್ರವನ್ನು ವಿಶ್ವಸಂಸ್ಥೆ ವ್ಯವಸ್ಥೆ (UN system)ಅಡಿ ಸೇರಿಸಬೇಕೆಂದು ಒತ್ತಾಯಿಸಿದೆ. ಚೀನಾದ ಹೊಸ ನಕ್ಷೆ ಬಗ್ಗೆ ನೇರವಾಗಿ ಉಲ್ಲೇಖಿಸದೆ ಬುಧವಾರ ತೈವಾನ್ ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 2758 ಅನ್ನು ಚೀನಾ ವಿರೂಪಗೊಳಿಸಿದ್ದರಿಂದ ತೈವಾನ್ ಅನ್ನು ವಿಶ್ವಸಂಸ್ಥೆಯಿಂದ ಹೊರಗಿಡುವುದನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದರು.
1971ರ ಅಕ್ಟೋಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ''ವಿಶ್ವಸಂಸ್ಥೆ ನಿರ್ಣಯ 2758 (XXVI)'' ಅನ್ನು ಅಂಗೀಕರಿಸಿದೆ. ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (People's Republic of China - PRC) ಮಾತ್ರ ಚೀನಾದ ಏಕೈಕ ಕಾನೂನುಬದ್ಧ ಸರ್ಕಾರ ಎಂದು ಹೇಳುತ್ತದೆ. ಈ ನಿರ್ಣಯವು ಆರ್ಓಸಿ (ರಿಪಬ್ಲಿಕ್ ಆಫ್ ಚೀನಾ ಅಥವಾ ತೈವಾನ್) ಅನ್ನು ಪಿಆರ್ಸಿ ಎಂದು ಬದಲಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡಿದೆ. ಈ ನಿರ್ಣಯವು ತೈವಾನ್ ಪಿಆರ್ಸಿಯ ಒಂದು ಭಾಗ ಎಂದು ಹೇಳುವುದಿಲ್ಲ ಅಥವಾ ವಿಶ್ವಸಂಸ್ಥೆ ಮತ್ತು ಅದರ ವಿಶೇಷ ಏಜೆನ್ಸಿಗಳಲ್ಲಿ ತೈವಾನ್ ಜನರನ್ನು ಪ್ರತಿನಿಧಿಸುವ ಹಕ್ಕನ್ನೂ ನೀಡುವುದಿಲ್ಲ ಎಂದು ದೆಹಲಿಯಲ್ಲಿರುವ ತೈವಾನ್ ಪ್ರತಿನಿಧಿ ಕಚೇರಿಯಲ್ಲಿ 'ಈಟಿವಿ ಭಾರತ್'ಗೆ ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು ಪ್ರತಿಕ್ರಿಯಿಸಿದರು.
ವಾಸ್ತವವಾಗಿ ಈ ನಿರ್ಣಯವು ಸದಸ್ಯ ರಾಷ್ಟ್ರ ಚೀನಾವನ್ನು ಯಾರು ಪ್ರತಿನಿಧಿಸುತ್ತದೆ ಎಂಬುದನ್ನು ಮಾತ್ರ ನಿರ್ಧರಿಸುತ್ತದೆ. ಇದನ್ನು 1971ರಲ್ಲಿ ಮತದಾನದ ನಂತರ ಅಂತರರಾಷ್ಟ್ರೀಯ ಸಮುದಾಯ ಮತ್ತು ಚೀನಾ ಸ್ವತಃ ಗುರುತಿಸಿದೆ. 2758ರ ನಿರ್ಣಯವು ವಿಶ್ವಸಂಸ್ಥೆಯ ಮೂಲಭೂತ ತತ್ವಗಳಿಗೆ ವ್ಯತಿರಿಕ್ತವಾಗಿದ್ದು, ಅದನ್ನು ಸರಿಪಡಿಸಬೇಕೆಂದೂ ಅವರು ಒತ್ತಾಯಿಸಿದರು.