ನವದೆಹಲಿ: ಜೂನ್ ತಿಂಗಳು ಕೊನೆಯಾಗಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಜುಲೈ ತಿಂಗಳು ಆರಂಭವಾಗುವುದರಲ್ಲಿದೆ. ಹೊಸ ತಿಂಗಳು ಕೆಲ ಹೊಸ ಬದಲಾವಣೆಗಳನ್ನು ಸಹ ತರಲಿದೆ. ನಿಮ್ಮ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವಂಥ ಕೆಲ ಬದಲಾವಣೆಗಳು ಜುಲೈ 1 ರಿಂದ ಜಾರಿಯಾಗಲಿವೆ. ಹಾಗಾದರೆ ಜುಲೈ 1 ರಿಂದ ಏನೆಲ್ಲ ಬದಲಾವಣೆಗಳಾಗಲಿವೆ ತಿಳಿಯೋಣ ಬನ್ನಿ.
ಕ್ರಿಪ್ಟೊಕರೆನ್ಸಿ ವಹಿವಾಟಿಗೆ ಟಿಡಿಎಸ್: ಕ್ರಿಪ್ಟೊಕರೆನ್ಸಿ ಮೇಲೆ ಶೇ 30 ರಷ್ಟು ತೆರಿಗೆ ವಿಧಿಸಿದ ನಂತರ ಈಗ ಕ್ರಿಪ್ಟೊ ಹೂಡಿಕೆದಾರರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ಜುಲೈ 1 ರಿಂದ ಕ್ರಿಪ್ಟೊ ವಹಿವಾಟಿನ ಮೇಲೆ ಶೇ 1 ರ ದರದಲ್ಲಿ ಟಿಡಿಎಸ್ ಪಾವತಿಸಬೇಕಾಗುತ್ತದೆ. ಕ್ರಿಪ್ಟೊವನ್ನು ನೀವು ಲಾಭ ಅಥವಾ ನಷ್ಟದಲ್ಲಿ ಮಾರಿದ್ದರೂ ಸರಿ.. ಆ ವಹಿವಾಟಿನ ಮೇಲೆ ಟಿಡಿಎಸ್ ಕಟ್ಟಲೇಬೇಕು. ಕ್ರಿಪ್ಟೊಗಳ ವಹಿವಾಟಿನ ಮೇಲೆ ನಿಖರವಾಗಿ ನಿಗಾ ಇಡಲು ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಗಿಫ್ಟ್ ಮೇಲೂ ಶೇ 10 ರಷ್ಟು ತೆರಿಗೆ: ಜುಲೈ 1, 2022 ರಿಂದ ವ್ಯವಹಾರಗಳಲ್ಲಿ ಪಡೆದ ಗಿಫ್ಟ್ ಮೇಲೆ ಶೇ 10ರ ದರದಲ್ಲಿ ಟಿಡಿಎಸ್ ಪಾವತಿಸಬೇಕಾಗುತ್ತದೆ. ಈ ತೆರಿಗೆಯು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಡಾಕ್ಟರುಗಳಿಗೆ ಅನ್ವಯವಾಗಲಿದೆ. ಯಾವುದೇ ಕಂಪನಿಯಿಂದ ಮಾರ್ಕೆಟಿಂಗ್ ಕೆಲಸಕ್ಕಾಗಿ ಗಿಫ್ಟ್ ರೂಪದಲ್ಲಿ ಹಣ ಸಂದಾಯವಾದರೆ ಅಂಥ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಹಾಗೂ ಡಾಕ್ಟರುಗಳಿಗೆ ಸಿಗುವ ಔಷಧಗಳ ಉಚಿತ ಸ್ಯಾಂಪಲ್, ವಿದೇಶ ಪ್ರಯಾಣದ ಗಿಫ್ಟ್ ಟಿಕೆಟ್ ಹಾಗೂ ಇನ್ನಾವುದೇ ದುಬಾರಿ ಗಿಫ್ಟ್ಗಳಿಗೆ ಈ ಟಿಡಿಎಸ್ ಅನ್ವಯವಾಗುತ್ತದೆ.
ಹೊಸ ಕಾರ್ಮಿಕ ನೀತಿ ಜಾರಿ ಸಾಧ್ಯತೆ: ಹೊಸ ತಿಂಗಳಿನಿಂದ ನೂತನ ಕಾರ್ಮಿಕ ನೀತಿಗಳು ಜಾರಿಯಾಗುವ ಸಾಧ್ಯತೆಗಳಿವೆ. ಇನ್ ಹ್ಯಾಂಡ್ ಸ್ಯಾಲರಿ, ನೌಕರರ ಕಚೇರಿ ಅವಧಿ, ಪಿಎಫ್ ವಂತಿಗೆ ಮತ್ತು ಗ್ರಾಚುಟಿ ಮುಂತಾದ ವಿಷಯಗಳ ಮೇಲೆ ಪರಿಣಾಮವಾಗಲಿದೆ. ಇದರನ್ವಯ ಕೆಲಸದ ಗರಿಷ್ಠ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸುವ ಪ್ರಸ್ತಾವನೆಯಿದೆ. ಅಂದರೆ ಉದ್ಯೋಗಿಗಳು ನಿತ್ಯ 12 ಗಂಟೆಯಂತೆ 4 ದಿನಗಳಲ್ಲಿ 48 ಗಂಟೆ ಕೆಲಸ ಮಾಡಬಹುದು. ಆದರೆ, ಈ ನಿಯಮಗಳನ್ನು ಜಾರಿ ಮಾಡುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.