ಘಟಾಲ್ (ಪಶ್ಚಿಮ ಬಂಗಾಳ): ಜೀವಂತ ನವಜಾತ ಶಿಶು ಮರಣಿಸಿದ್ದಾಗಿ ವೈದ್ಯರು ಪ್ರಮಾಣ ಪತ್ರ ನೀಡಿ ಶವವನ್ನು ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ಒಪ್ಪಿಸಿದ ಅಚಾತುರ್ಯ ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯ ಘಟಲ್ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶನಿವಾರ ವರದಿಯಾಗಿದೆ. ಪೋಷಕರು ಅಂತ್ಯಕ್ರಿಯೆಗೆ ಸಜ್ಜಾಗುತ್ತಿದ್ದಂತೆ ಮಗು ಉಸಿರಾಡಿದೆ. ಮತ್ತೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ಪ್ರಾಣ ಉಳಿಸಲು ಪ್ರಯತ್ನಿಸಿದರೂ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆಯಿತು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೆರಿಗೆ ನೋವಿನ ಹಿನ್ನೆಲೆಯಲ್ಲಿ ಮೊನಾಲಿಸಾ ಖಾತುನ್ ಎಂಬ ಮಹಿಳೆ ಶನಿವಾರ ಮುಂಜಾನೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದು ಅವಧಿಪೂರ್ವ ಹೆರಿಗೆ ಎಂದು ವೈದ್ಯರು ತಿಳಿಸಿ, ಸಂಜೆ 5 ಗಂಟೆಗೆ ಮಗು ಮೃತಪಟ್ಟಿರುವುದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಲ್ಲದೇ ಮರಣ ಪ್ರಮಾಣ ಪತ್ರವನ್ನೂ ನೀಡಿ ದೇಹವನ್ನು ಪ್ಯಾಕ್ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಮಗುವಿನ ಸಾವಿನ ಸುದ್ದಿಯಿಂದ ದುಃಖಿತರಾಗಿದ್ದ ಕುಟುಂಬ ಸದಸ್ಯರು, ಸಂಪ್ರದಾಯದಂತೆ ಅಂತ್ಯಕ್ರಿಯೆ ಪೂರೈಸಲು ಮುಂದಾಗಿದ್ದು, ಮಗು ಉಸಿರಾಡಿರುವುದನ್ನು ಗಮನಿಸಿದ್ದಾರೆ.
ಜೀವಂತವಾಗಿರುವ ನವಜಾತ ಮಗುವನ್ನು ತಕ್ಷಣ ಕುಟುಂಬಸ್ತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪುನರಾರಂಭಿಸಿದ್ದಾರೆ. ಆದರೆ, ಮಗು ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ಬದುಕಿರುವ ನವಜಾತ ಮಗು ಸತ್ತಿದೆ ಎಂದು ಘೋಷಿಸುವ ಮೂಲಕ ವೈದ್ಯರು ಮರಣ ಪ್ರಮಾಣ ಪತ್ರ ನೀಡಿರುವುದೇಕೆ ಎಂದು ತಂದೆ ಪ್ರಶ್ನಿಸಿದ್ದಾರೆ. ವೈದ್ಯರ ಅಚಾತುರ್ಯ ಮತ್ತು ನಿರ್ಲಕ್ಷ್ಯದಿಂದ ಮಗು ಸಾವಿಗೀಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಹಲವು ಗಂಟೆಗಳ ಕಾಲ ದೇಹವನ್ನು ಪ್ಯಾಕ್ ಮಾಡಿದ ಪರಿಣಾಮ ಮಗುವಿನ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಆರೋಪಿಸಿದರು.