ನವದೆಹಲಿ: ತಮ್ಮ ಮೇಲೆ ಕೇಳಿ ಬಂದ ಗಂಭೀರ ಆರೋಪಕ್ಕೆ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸ್ಪಷ್ಟನೆ ನೀಡಿದ್ದು, ಬಿಜೆಪಿ ವಕ್ತಾರರ ಆರೋಪವನ್ನ ತಳ್ಳಿ ಹಾಕಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪಾಕಿಸ್ತಾನದ ಐಎಸ್ಐ ಗೂಢಚಾರಿಕೆ ನಡೆಸಿರುವ ಅಲ್ಲಿನ ಪತ್ರಕರ್ತರನ್ನ ಭಾರತಕ್ಕೆ ಕರೆಸಿಕೊಂಡಿದ್ದಾರೆಂದು ಬಿಜೆಪಿ ವಕ್ತಾರರು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮೇಲೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದೊಂದು ಸುಳ್ಳಿನ ಸರಮಾಲೆ ಎಂದು ಹೇಳಿಕೆ ನೀಡಿದ್ದಾರೆ. ಅನ್ಸಾರಿ ಅವರು ನೀಡಿರುವ ಆಹ್ವಾನದ ಮೇರೆಗೆ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಭಾರತದ ಪ್ರವಾಸ ಕೈಗೊಂಡಿದ್ದರು. ಜೊತೆಗೆ ಅವರನ್ನ ಭೇಟಿ ಮಾಡಿದ್ದರು ಎಂದು ಬಿಜೆಪಿಯ ಗೌರವ್ ಭಾಟಿಯಾ ಆರೋಪ ಮಾಡಿದ್ದರು.
ಭಾರತ ಸರ್ಕಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನನ್ನ ಭೇಟಿ ಹಾಗೂ ಸಭೆಗಳ ಬಗ್ಗೆ ಗೊತ್ತಿರುತ್ತದೆ. ಹೀಗಾಗಿ, ಬಿಜೆಪಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. 2010ರಲ್ಲಿ ನಾನು ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರ ಸಂಕಿರಣ ಉದ್ವಾಟನೆ ಮಾಡಿದ್ದೆ. ಆದರೆ, ಅದರಲ್ಲಿ ಭಾಗಿಯಾದವರಿಗೆ ಆಯೋಜಕರು ಆಹ್ವಾನ ನೀಡಿರುತ್ತಾರೆ. ನಾನು ಪತ್ರಕರ್ತ ಮಿರ್ಜಾ ಅವರನ್ನ ಆಹ್ವಾನಿಸಿಲ್ಲ ಎಂದು ಮಾಜಿ ಉಪರಾಷ್ಟ್ರಪತಿ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿರಿ:ಉದಯ್ಪುರ ಹತ್ಯೆ ಕೇಸ್: ಇಸ್ಲಾಮಿ ಸಂಘಟನೆಯ 40 ಜನರಿಗಾಗಿ NIA ಶೋಧ.. ಪಾಕ್ನಿಂದ ಆನ್ಲೈನ್ ತರಬೇತಿ
ಕೇಂದ್ರದಲ್ಲಿ ಯುಪಿಎ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ನಾನು ಭಾರತಕ್ಕೆ ಐದು ಸಲ ಭೇಟಿ ನೀಡಿದ್ದೆ. ಇಲ್ಲಿನ ಮಾಹಿತಿ ಭಾರತಕ್ಕೆ ನೀಡಿದೆ ಎಂದು ಐಎಸ್ಐ ಪರ ಕೆಲಸ ಮಾಡಿದ್ದ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಉಪರಾಷ್ಟ್ರಪತಿ ಹಮ್ಮಿದ್ ಅನ್ಸಾರಿ ಹಾಗೂ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ವಕ್ತಾರರು ಆಗ್ರಹಿಸಿದ್ದರು.