ಕರೌಲಿ, ರಾಜಸ್ಥಾನ :ಅದು ಏಪ್ರಿಲ್ 2.. ರಾಜಸ್ಥಾನದ ಕರೌಲಿಯಲ್ಲಿ ಕೋಮು ಹಿಂಸಾಚಾರ ಆವರಿಸಿತ್ತು. ಕೋಮು ದಳ್ಳುರಿಗೆ ಸಾಕಷ್ಟು ಆಸ್ತಿ-ಪಾಸ್ತಿಗೆ ಹಾನಿಯಾಗಿತ್ತು. ಗಲ್ಲಿಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಅಂಗಡಿಗಳು, ವಾಹನಗಳು, ಸುಟ್ಟು ಭಸ್ಮವಾಗುತ್ತಿದ್ದವು. ಈ ವೇಳೆ ಬೆಂಕಿಗೆ ಆಹುತಿಯಾಗುತ್ತಿದ್ದ ಎರಡು ಅಂಗಡಿಗಳ ಮಧ್ಯೆ ಮನೆಯಲ್ಲಿದ್ದ ಪುಟ್ಟ ಕಂದಮ್ಮನನ್ನು ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದು, ಪೊಲೀಸ್ ಕಾನ್ಸ್ಟೇಬಲ್ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಗಾದಿ ಹಬ್ಬದ ಹೊಸ ವರ್ಷಾಚರಣೆಯ ಅಂಗವಾಗಿ ಕರೌಲಿಯ ಮುಸ್ಲಿಂ ಪ್ರಾಬಲ್ಯದ ಪ್ರದೇಶವೊಂದರಲ್ಲಿ ಬೈಕ್ ರ್‍ಯಾಲಿಯೊಂದು ಹಾದು ಹೋಗುತ್ತಿತ್ತು. ಈ ವೇಳೆ ಕಲ್ಲು ತೂರಾಟ ನಡೆದು, ನಂತರದ ಕೆಲವೇ ಕ್ಷಣಗಳಲ್ಲಿ ಕೋಮು ಹಿಂಸೆ ಆರಂಭವಾಯಿತು. ಕೋಮು ಹಿಂಸೆಯ ಕಾರಣದಿಂದ ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಇಡಲಾಗಿತ್ತು. ಈ ವೇಳೆ ಹೊತ್ತಿ ಉರಿಯುತ್ತಿದ್ದ ಗಲ್ಲಿಗಳಲ್ಲೇ ಸಾಹಸ ಪ್ರದರ್ಶಿಸಿದ ಕಾನ್ಸ್ಟೇಬಲ್ ನೇತ್ರೇಶ್ ಶರ್ಮಾ ಎಂಬುವರು ಮಗುವೊಂದನ್ನು ರಕ್ಷಣೆ ಮಾಡಿದ್ದಾರೆ.
'ನನ್ನ ಜವಾಬ್ದಾರಿ ಅಷ್ಟೇ..':ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್ಸ್ಟೇಬಲ್ ನೇತ್ರೇಶ್ ಶರ್ಮಾ, 'ರ್‍ಯಾಲಿ ವೇಳೆ ಯಾರೋ ಕಲ್ಲು ತೂರಾಟ ಮಾಡಿದರು. ಇದೇ ವೇಳೆ ರಸ್ತೆಯಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳು ಕಾಣಿಸಿದರು. ಅವರು ಆಸ್ಪತ್ರೆಗೆ ಹೋಗಬೇಕೆಂದು ಕೇಳಿದಾಗ ನಾನು ಸಹಕರಿಸಿದೆ. ಅದೇ ವೇಳೆ ಎರಡು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿತು.