ಬೆಂಗಳೂರು:ಚೀನಾ ಮೂಲದ ಮೊಬೈಲ್ ಉತ್ಪಾದನಾ ಕಂಪನಿ ಒಪ್ಪೊ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇಸ್ರೋ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ನಾವಿಕ್ (NavIC) ತಂತ್ರಜ್ಞಾನದಲ್ಲಿ ಮತ್ತಷ್ಟು ಸಂಶೋಧನೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭಾರತದಲ್ಲಿರುವ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು, ಆ ಮೊಬೈಲ್ಗಳಲ್ಲಿ ನಾವಿಕ್ ಸೇವೆಯನ್ನು ಒದಗಿಸಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೂ ಅಮೆರಿಕದ ಜಿಪಿಎಸ್ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸುತ್ತಿದ್ದು, ನಾವಿಕ್ ಅನುಷ್ಠಾನದ ನಂತರ ಜಿಪಿಎಸ್ ಬಳಕೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
ವಿವಿ ತಂತ್ರಜ್ಞಾನಗಳ ಮೂಲಕ ನಾವಿಕ್ ಅಪ್ಲಿಕೇಶನ್ ಅನ್ನು ಮುನ್ನೆಲೆಗೆ ತರುವಲ್ಲಿನ ಒಪ್ಪೋ ಇಂಡಿಯಾದ ಪ್ರಯತ್ನಗಳನ್ನು ಇಸ್ರೋ ಅಧ್ಯಕ್ಷ ಕೆ.ಶಿವನ್ ಶ್ಲಾಘಿಸಿದ್ದು, ಮುಂಬರುವ ಎಲ್ಲಾ ಮೊಬೈಲ್ಗಳಲ್ಲಿ ನಾವಿಕ್ ಅಳವಡಿಸಲು ಒಪ್ಪೊ ಇಂಡಿಯಾದೊಂದಿಗಿನ ಒಪ್ಪಂದ ಸಹಕಾರಿಯಾಗಲಿದೆ ಎಂದಿದ್ದಾರೆ.
ಒಪ್ಪೋ ಒಪ್ಪಂದದ ವಿರುದ್ಧ ಆಕ್ರೋಶ..
ಇಸ್ರೋ, ಒಪ್ಪೊ ಇಂಡಿಯಾದೊಂದಿಗೆ ಮಾಡಿಕೊಳ್ಳುತ್ತಿರುವ ಒಪ್ಪಂದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈರಿ ರಾಷ್ಟ್ರಗಳೊಂದಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳುವುದು ಅಪಾಯಕಾರಿ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ವಕ್ತಾರೆಯಾದ ಡಾ.ಶಮಾ ಮೊಹಮದ್ ಕೂಡಾ ಇಸ್ರೋ ಒಪ್ಪಂದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಆಘಾತಕಾರಿ ವಿಚಾರ. ಒಂದು ಕಡೆ ಚೀನಾ ಅಕ್ರಮವಾಗಿ ಭಾರತೀಯ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ಇಸ್ರೋ ಅಂತಹ ರಾಷ್ಟ್ರದ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಟೀಕಿಸಿದ್ದಾರೆ. ಇದರ ಜೊತೆಗೆ ಇನ್ನೂ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಹಲೋ ಚೀನಾ. ಲಾಟ್ಸ್ ಆಫ್ ಲವ್, ಇಸ್ರೋ' ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಶಿವಸೇನಾ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಒಂದು ಕಡೆ ಗಡಿಯಲ್ಲಿ ನಾವು ಚೀನಾ ವಿರುದ್ಧ ಕಾದಾಡುತ್ತಿದ್ದೇವೆ. ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ರೀತಿಯ ಒಪ್ಪಂದದಿಂದ ಭಾರತೀಯ ಭದ್ರತೆಗೆ ಮತ್ತಷ್ಟು ಆತಂಕ ಎದುರಾಗಲಿದೆ ಎಂಬುದನ್ನು ಮರೆತುಬಿಟ್ಟಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್.. ಬಿಟ್ಕಾಯಿನ್ ಮಾನ್ಯತೆ ಕುರಿತಾದ ಟ್ವೀಟ್ ವೈರಲ್