ಕಠ್ಮಂಡು(ನೇಪಾಳ):ಮೂರು ದಿನಗಳ ಹಿಂದಷ್ಟೇ ಪಸಾಂಗ್ ದಾವಾ 26 ನೇ ಬಾರಿಗೆ ವಿಶ್ವದ ಅತಿ ಎತ್ತರದ ಹಿಮಶಿಖರ ಎವರೆಸ್ಟ್ ಹತ್ತಿ ದಾಖಲೆ ಮಾಡಿದ್ದರು. ಇದಾದ ಬೆನ್ನಲ್ಲೇ ಇಂದು ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 27 ನೇ ಬಾರಿಗೆ ಮೌಂಟ್ ಎವರೆಸ್ಟ್ ಆರೋಹಣ ಮಾಡುವ ಮೂಲಕ ದಾಖಲೆ ಬರೆದರು.
53 ವರ್ಷ ವಯಸ್ಸಿನ ಶೆರ್ಪಾ ಕಾಮಿ ರೀಟಾ ಅವರು ಈ ಹಿಂದೆ 26 ಬಾರಿ ವಿಶ್ವದ ಅತಿ ಎತ್ತರದ ಶಿಖರವನ್ನು ಹತ್ತಿ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮುರಿದರು. ಕಾಮಿ ರೀಟಾ ಅವರು ಬುಧವಾರ ಬೆಳಗ್ಗೆ 8,849 ಮೀಟರ್ (29,032 ಅಡಿ) ಪರ್ವತವನ್ನು ಆರೋಹಣ ಮಾಡಿದರು ಎಂದು ಅವರ ಸಾಹಸದ ಸಂಘಟಕ ಸೆವೆನ್ ಸಮ್ಮಿಟ್ ಟ್ರೆಕ್ಸ್ ಹೇಳಿದೆ.
"ಇಂದು ಬೆಳಗ್ಗೆ 8.30 ಗಂಟೆಗೆ, ಕಾಮಿ ರೀಟಾ ಅವರು ನಂಬಲಸಾಧ್ಯವಾದ 27 ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದರು ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ಹೇಳಿದರು. ಮೇ 14 ರಂದು ಇನ್ನೊಬ್ಬ ಶೆರ್ಪಾ ಪಸಾಂಗ್ ದಾವಾ ಅವರು 26 ನೇ ಬಾರಿಗೆ ಶಿಖರವನ್ನು ಆರೋಹಣ ಮಾಡಿ ಕಾಮಿ ರೀಟಾ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಕಾಮಿ ರೀಟಾ ಅವರು ಅದನ್ನೂ ದಾಟಿದ್ದಾರೆ.
1994 ರಿಂದ ಆರೋಹಣ ಅಭ್ಯಾಸ:ಸೆವೆನ್ ಸಮ್ಮಿಟ್ ಟ್ರೆಕ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಿರಿಯ ಶೆರ್ಪಾ ಆಗಿ ಕೆಲಸ ಮಾಡುತ್ತಿರುವ ಕಾಮಿ ರೀಟಾ, ಮೇ 13, 1994 ರಂದು ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರಿದ್ದರು. 1994 ರಿಂದ 2023 ರ ನಡುವೆ ಅವರು 27 ಬಾರಿ ಶಿಖರವನ್ನು ಹತ್ತಿದ್ದಾರೆ.