ನೇಪಾಳ/ಕಠ್ಮಂಡು :ಪ್ರಪಂಚದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ಎತ್ತರದ ಕುರಿತು ಇಂದು ನೇಪಾಳ ಸರ್ಕಾರ ಪರಿಷ್ಕೃತ ಮಾಹಿತಿ ನೀಡಲಿದೆ. ಇದಕ್ಕಾಗಿಯೇ ನೇಪಾಳ ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ನೇಪಾಳದ ಸರ್ವೆಯನ್ನು ಮಂಗಳವಾರ ಮೌಂಟ್ ಎವರೆಸ್ಟ್‌ನ ಪರಿಷ್ಕೃತ ಎತ್ತರ ಘೋಷಣೆ ಮಾಡಲಿದೆ.
ಇದೇ ಕಾರ್ಯಕ್ರಮದಲ್ಲಿ ಮೌಂಟ್ ಎವರೆಸ್ಟ್‌ನ ಸರ್ವೇ ಕಾರ್ಯದಲ್ಲಿ ಭಾಗಿಯಾಗಿದ್ದವರನ್ನು ಕೂಡ ಸನ್ಮಾನಿಸಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ ಎಂದು ಹಿಮಾಲಯದ ಸಮೀಕ್ಷಾ ವಿಭಾಗದ ಉಪ ಮಹಾನಿರ್ದೇಶಕ ಸುಶೀಲ್ ನರಸಿಂಗ್ ರಾಜ್‌ಭಂಡಾರಿ ಹೇಳಿದ್ದಾರೆ.
2015ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನೇಪಾಳ ಭೂಕಂಪನದ ಬಳಿಕ ಮೌಂಟ್ ಎವರೆಸ್ಟ್‌ನ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂದು ತಜ್ಞರು ಶಂಕಿಸಿದ್ದರು. ಇದೇ ಕಾರಣಕ್ಕೆ ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್‌ನ ಎತ್ತರ ಅಳೆಯುವ ಯೋಜನೆ ಆರಂಭಿಸಿತು. ಪರ್ವತದ ಎತ್ತರವನ್ನು ಪುನಃ ಅಳೆಯಲು ನೇಪಾಳಿ ಅಧಿಕಾರಿಗಳು ಮತ್ತು ತಜ್ಞರನ್ನು ನಿಯೋಜಿಸುವಾಗ, ನೇಪಾಳ ಸರ್ಕಾರವು ತನ್ನ ದೇಶೀಯ ಪ್ರಯತ್ನಗಳಲ್ಲಿ ಚೀನಾದೊಂದಿಗೆ ಸಮನ್ವಯ ಸಾಧಿಸಿತು.
2019ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೇಪಾಳ ಭೇಟಿಯ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳು ಜಂಟಿಯಾಗಿ ವಿಶ್ವದ ಅತಿ ಎತ್ತರದ ಶಿಖರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಇದೀಗ ಈ ಸರ್ವೆ ಕಾರ್ಯ ಮುಕ್ತಾಯವಾಗಿದ್ದು, ನಾಳೆ ಅಧಿಕೃತವಾಗಿ ಶಿಖರದ ಪರಿಷ್ಕೃತ ಎತ್ತರ ಘೋಷಣೆ ಮಾಡಲಾಗುತ್ತದೆ.
1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದಿತ್ತು. ಅಂದು ಸರ್ವೆ ಆಫ್ ಇಂಡಿಯಾ ಘೋಷಣೆ ಮಾಡಿದ್ದ 8, 848 ಮೀಟರ್ ಎತ್ತರವೇ ಮೌಂಟ್ ಎವರೆಸ್ಟ್‌ನ ಅಂಗೀಕರಿಸಲ್ಪಟ್ಟ ಮತ್ತು ಗುರುತಿಸಲ್ಪಟ್ಟ ಎತ್ತರವಾಗಿದೆ.