ಕಠ್ಮಂಡು (ನೇಪಾಳ) : ತನ್ನ ದೇಶಕ್ಕೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ. ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೇಪಾಳ ಭಾರತಕ್ಕೆ ಮನವಿ ಮಾಡಿದೆ. ಭಾರತವು ತನ್ನ ಅಕ್ಕಿ ರಫ್ತಿಗೆ ನಿಷೇಧ ಹೇರಿದ ಬಳಿಕ ಜಗತ್ತಿನಲ್ಲಿ ಅಕ್ಕಿಗಾಗಿ ಹಾಹಾಕಾರ ಉಂಟಾಗಿದ್ದು, ಈಗ ನೇಪಾಳ ಅಕ್ಕಿಗಾಗಿ ಭಾರತಕ್ಕೆ ಮನವಿ ಮಾಡಿರುವುದು ಗಮನಾರ್ಹ.
"1,00,000 ಟನ್ ಅಕ್ಕಿ, 50,000 ಟನ್ ಸಕ್ಕರೆ ಮತ್ತು ಒಂದು ಮಿಲಿಯನ್ ಟನ್ ಭತ್ತ ಪೂರೈಸುವಂತೆ ನಾವು ಭಾರತಕ್ಕೆ ವಿನಂತಿಸಿದ್ದೇವೆ" ಎಂದು ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಮ್ ಚಂದ್ರ ತಿವಾರಿ ತಿಳಿಸಿದ್ದಾರೆ. ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಹರಡಿದೆ. ಸಾರ್ವಜನಿಕರ ಆತಂಕವನ್ನು ಹೋಗಲಾಡಿಸಲು ನಾವು ಧಾನ್ಯ ಮತ್ತು ಸಕ್ಕರೆ ಪೂರೈಸುವಂತೆ ಮನವಿ ಮಾಡಿದ್ದೇವೆ ಎಂದು ತಿವಾರಿ ಹೇಳಿದರು.
ಎಲ್ ನಿನೋ ಹವಾಮಾನದ ಅಲೆಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಜುಲೈ 20 ರಿಂದ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ನೇಪಾಳಿ ವ್ಯಾಪಾರಿಗಳು ನೇಪಾಳದಲ್ಲಿ ಅಕ್ಕಿ ಮತ್ತು ಭತ್ತ ಸಂಗ್ರಹಿಸಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ನೇಪಾಳದಲ್ಲಿ ಬಾಸ್ಮತಿ ಅಲ್ಲದ ಅಕ್ಕಿಯ ಬೆಲೆ ಏರಿಕೆಯಾಗಿದೆ. ಅಕ್ಕಿ ನೇಪಾಳದಲ್ಲಿ ಪ್ರಧಾನ ಆಹಾರವಾಗಿದ್ದು, ಹೆಚ್ಚಾಗಿ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ.