ಕರ್ನಾಟಕ

karnataka

ETV Bharat / bharat

ನೇಪಾಳ ವಿಮಾನ ಪತನ: ಅಂತಿಮ ಕ್ಷಣದ ವಿಡಿಯೋ! - ಪ್ರಧಾನಿ ಪುಷ್ಪ ಕಮಲ್ ದಹಲ್

ನೇಪಾಳ ವಿಮಾನ ಪತನಗೊಳ್ಳುವುದಕ್ಕೆ ಕೆಲವೇ ಕ್ಷಣಗಳ ಮುನ್ನ ಸೆರೆಯಾದ ದೃಶ್ಯ ಇಲ್ಲಿದೆ.

ನೇಪಾಳ ವಿಮಾನ ಪತನಗೊಳ್ಳುವ ಅಂತಿಮ ಕ್ಷಣದ ವಿಡಿಯೋ ಸೆರೆ
ನೇಪಾಳ ವಿಮಾನ ಪತನಗೊಳ್ಳುವ ಅಂತಿಮ ಕ್ಷಣದ ವಿಡಿಯೋ ಸೆರೆ

By

Published : Jan 16, 2023, 8:54 AM IST

ನವದೆಹಲಿ: ನಿನ್ನೆ ಬೆಳಗ್ಗೆ ಅಪಘಾತಕ್ಕೀಡಾದ ನೇಪಾಳ ವಿಮಾನದ ಅಂತಿಮ ಕ್ಷಣಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 72 ಜನರಿದ್ದ ವಿಮಾನ ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಧರೆಗಪ್ಪಳಿಸಿತ್ತು. ಘಟನೆಯಲ್ಲಿ 68ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಉಳಿದವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಜನರ ಮೊಬೈಲ್‌ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ನತದೃಷ್ಟ ವಿಮಾನದಲ್ಲಿ ಐವರು ಭಾರತೀಯರು ಸೇರಿದಂತೆ ಕನಿಷ್ಠ 10 ವಿದೇಶಿಯರಿದ್ದರು. ಅಭಿಶೇಖ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್‌ಭರ್, ಸೋನು ಜೈಸ್ವಾಲ್ ಮತ್ತು ಸಂಜಯ ಜೈಸ್ವಾಲ್ ಎಂದು ಮೃತಪಟ್ಟ ಭಾರತೀಯರೆಂದು ಗುರುತಿಸಲಾಗಿದೆ. ಈ ಮಾಹಿತಿಯನ್ನು ಯೇತಿ ಏರ್‌ಲೈನ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇಟಿ ನದಿ ದಡದಲ್ಲಿ ವಿಮಾನ ಪತನ: ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕಾಫ್ ಆಗಿದ್ದು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪೋಖರಾ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ. ಪೋಖರಾ ಹಿಮಾಲಯ ರಾಷ್ಟ್ರದ ಪ್ರಮುಖ ಪ್ರವಾಸಿ ತಾಣವೂ ಹೌದು. ಈ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ನದಿಯ ದಡದಲ್ಲಿ ವಿಮಾನ ಧರೆಗಪ್ಪಳಿಸಿದೆ.

ಸಾರ್ವಜನಿಕ ರಜೆ ಘೋಷಿಸಲು ನಿರ್ಧಾರ: ಚೀನಾದ ನೆರವಿನೊಂದಿಗೆ ನಿರ್ಮಿಸಲಾದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ಅವರು ಎರಡು ವಾರಗಳ ಹಿಂದೆ ಉದ್ಘಾಟಿಸಿದ್ದರು. ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಭಾನುವಾರ ಮಧ್ಯಾಹ್ನ ನಡೆದ ಸಚಿವ ಸಂಪುಟದ ತುರ್ತು ಸಭೆಯಲ್ಲಿ ವಿಮಾನ ದುರಂತದ ಸಂತ್ರಸ್ತರಿಗೆ ಸಂತಾಪ ಸೂಚಿಸಲು ಜನವರಿ 16 ರಂದು(ಇಂದು) ಸಾರ್ವಜನಿಕ ರಜೆ ಘೋಷಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:72 ಜನರಿದ್ದ ನೇಪಾಳ ವಿಮಾನ ಪತನ: 68 ಮೃತದೇಹ ಪತ್ತೆ

ABOUT THE AUTHOR

...view details