ಕಠ್ಮಂಡು(ನೇಪಾಳ): ಇಂದು ಮಧ್ಯಾಹ್ನ ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಪತನ ದುರಂತದಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಮಂದಿಯೂ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ 15 ಮಂದಿ ವಿದೇಶಿ ಪ್ರಯಾಣಿಕರಲ್ಲಿ ಐವರು ಭಾರತೀಯರಾಗಿದ್ದಾರೆ. ಹೊಸದಾಗಿ ತೆರೆಯಲಾಗಿದ್ದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನ ವಿಮಾನ ಲ್ಯಾಂಡ್ ಆಗುವ ವೇಳೆ ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಪತನಗೊಂಡಿದೆ.
ಘಟನೆ ನಡೆದ ಕ್ಷಣದಿಂದಲೇ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಇದುವರೆಗೆ 68 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ನಾಲ್ಕು ಮೃತದೇಹಗಳನ್ನು ಹೊರತೆಗೆಯುವ ಪ್ರಯತ್ನ ಮುಂದುವರಿದಿದೆ. ಮೃತದೇಹಗಳನ್ನು ಹೊರತೆಗೆಯಲಾಗಿದೆಯಷ್ಟೇ ಹೊರತು ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಭಾರತದ ನೇಪಾಳ ರಾಯಭಾರಿ ಶಂಕರ್ ಪಿ ಶರ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನೇಪಾಳ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಲ್ಕು ರಷ್ಯನ್ನರು, ಇಬ್ಬರು ಕೊರಿಯನ್ನರು ಮತ್ತು ಐರ್ಲೆಂಡ್, ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ತಲಾ ಒಬ್ಬರು ಸೇರಿದಂತೆ ವಿಮಾನದಲ್ಲಿದ್ದ 15 ವಿದೇಶಿಯರಲ್ಲಿ ಐವರು ಭಾರತೀಯರು ಸೇರಿದ್ದಾರೆ. ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಅವಳಿ ಇಂಜಿನ್ ಎಟಿಆರ್ 72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಹೊರಟಿತ್ತು.
ಐವರು ಭಾರತೀಯರ ಸಾವು: ಪತನಗೊಂಡ ವಿಮಾನದಲ್ಲಿದ್ದ ಐವರು ಭಾರತೀಯರನ್ನು ಅಭಿಷೇಖ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್‌ಭರ್, ಸೋನು ಜೈಸ್ವಾಲ್ ಮತ್ತು ಸಂಜಯ ಜೈಸ್ವಾಲ್ ಎಂದು ಗುರುತಿಸಲಾಗಿದೆ. ವಿಮಾನ ಪತನಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ವಿಮಾನವು ಅಪಘಾತಕ್ಕೀಡಾಗುವ ಸ್ವಲ್ಪ ಸಮಯದ ಮೊದಲು ವಿಮಾನ ನಿಲ್ದಾಣದೊಂದಿಗೆ ಕೊನೆಯ ಬಾರಿಗೆ ಸಂಪರ್ಕ ಸಾಧಿಸಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.