ಕರ್ನಾಟಕ

karnataka

ETV Bharat / bharat

ಕೋವಿಡ್‌ ಲಸಿಕೆ : ಭಾರತ - ಚೀನಾವನ್ನು ಎದುರುನೋಡುತ್ತಿರುವ ನೇಪಾಳ

ಎರಡನೇ ಹಂತದಲ್ಲಿ ಕೊರೊನಾ ವೈರಸ್ ಸೋಂಕು ಮತ್ತು ಅದರ ಮಾರಣಾಂತಿಕ ಪರಿಣಾಮಗಳಿಂದ ಪೀಡಿತರಾದ ಹೆಚ್ಚಿನ ಜನರಿಗೆ ಲಸಿಕೆ ನೀಡಲು ನೇಪಾಳ ಯೋಜನೆ ರೂಪಿಸಿದೆ . 55 ವರ್ಷಕ್ಕೂ ಅಧಿಕ ವಯಸ್ಸಿನ ಜನರನ್ನೂ ಲಸಿಕೆ ಅಭಿಯಾನದ ವ್ಯಾಪ್ತಿಗೆ ತರಲು ಅದು ನಿರ್ಧರಿಸಿದೆ . ಕೋವಿಶೀಲ್ಡ್‌ಗಾಗಿ ಸೆರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾವನ್ನು ಅದು ಎದುರು ನೋಡುತ್ತಿರುವಂತೆಯೇ ಹೊಸ ಲಸಿಕೆಗಳ ಸರಬರಾಜಿಗಾಗಿ ಬೀಜಿಂಗ್‌ನತ್ತಲೂ ಮುಖ ಮಾಡಿದೆ.

Nepal looks to China and India
ಕೋವಿಡ್‌ ಲಸಿಕೆ

By

Published : Mar 26, 2021, 10:49 AM IST

ಕೊರೊನಾ ವೈರಸ್‌ ಎರಡನೇ ಅಲೆಯ ಭೀತಿ ಹೆಚ್ಚಾದಂತೆ ತನ್ನ ನೆರೆಯ ಎರಡು ದೈತ್ಯ ರಾಷ್ಟ್ರಗಳಿಂದ ಕೋವಿಡ್‌ - 19 ಲಸಿಕೆ ಪಡೆಯಲು ಕಠ್ಮಂಡುವಿನಲ್ಲಿರುವ ಭಾರತ ಮತ್ತು ಚೀನಾ ರಾಯಭಾರಿಗಳೊಂದಿಗೆ ನೇಪಾಳ ಮಾತುಕತೆ ತೀವ್ರಗೊಳಿಸಿದೆ. ಸಿನೋಫಾರ್ಮ್‌ ಅಭಿವೃದ್ಧಿಗೊಳಿಸಿದ ಲಸಿಕೆಗಳನ್ನು ಚೀನಾದಿಂದ ಉಡುಗೊರೆ ರೂಪದಲ್ಲಿ ಇದು ಪಡೆಯುತ್ತಿದ್ದರೂ ಒಂದು ವರ್ಷದಲ್ಲಿ ತನ್ನ ಜನರಿಗೆ ಲಸಿಕೆ ಅಭಿಯಾನಕ್ಕಾಗಿ ಯೋಜನೆ ರೂಪಿಸುತ್ತಿರುವುದರಿಂದ ಹಿಮಾಲಯ ರಾಷ್ಟ್ರವಾದ ನೇಪಾಳಕ್ಕೆ ಭಾರತ ನಿರ್ಣಾಯಕ ಆಗಲಿದೆ .

'ಲಸಿಕೆ ರಾಜತಾಂತ್ರಿಕತೆ' ಯ ಭಾಗವಾಗಿ ಭಾರತ ದತ್ತಿ ಅಥವಾ ಉಡುಗೊರೆಯಾಗಿ ಸೆರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿರುವ ಹತ್ತುಲಕ್ಷ ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳನ್ನು ಪಡೆದು ಜನವರಿ 27 ರಂದು ಲಸಿಕೆ ಅಭಿಯಾನ ಆರಂಭಿಸಿತು. ನೇಪಾಳ ಸೆರಮ್‌ನಿಂದ ಕೋವಿಶೀಲ್ಡ್‌ ಲಸಿಕೆ ಖರೀದಿಸಿದಾಗ ಮತ್ತು ಹೆಚ್ಚುವರಿಯಾಗಿ ಆಸ್ಟ್ರಾಜೆನಿಕಾ ಲಸಿಕೆಗಳು ನೇಪಾಳಕ್ಕೆ ಬಂದಿಳಿದ ಸಂದರ್ಭದಲ್ಲಿಯೇ ಕೋವ್ಯಾಕ್ಸ್‌ ಹೆಸರಿನ ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯೂಎಚ್‌ ಒ ) ನೇತೃತ್ವದ ಯೋಜನೆಯೊಂದು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಲಸಿಕೆ ವಿತರಿಸುವುದನ್ನು ಗುರಿಯಾಗಿಸಿಕೊಂಡಿತು.

ಇದೆಲ್ಲದರಿಂದಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ದುರ್ಬಲ ವರ್ಗದ ಹದಿನೇಳು ಲಕ್ಷ ಮಂದಿಗೆ ಲಸಿಕೆ ನೀಡುವುದು ಶಕ್ಯವಾಯಿತು.

ಎರಡನೇ ಹಂತದಲ್ಲಿ ಕೊರೊನಾ ವೈರಸ್ ಸೋಂಕು ಮತ್ತು ಅದರ ಮಾರಣಾಂತಿಕ ಪರಿಣಾಮಗಳಿಂದ ಪೀಡಿತರಾದ ಹೆಚ್ಚಿನ ಜನರಿಗೆ ಲಸಿಕೆ ನೀಡಲು ನೇಪಾಳ ಯೋಜನೆ ರೂಪಿಸಿದೆ . 55 ವರ್ಷಕ್ಕೂ ಅಧಿಕ ವಯಸ್ಸಿನ ಜನರನ್ನೂ ಲಸಿಕೆ ಅಭಿಯಾನದ ವ್ಯಾಪ್ತಿಗೆ ತರಲು ಅದು ನಿರ್ಧರಿಸಿದೆ. ಕೋವಿಶೀಲ್ಡ್‌ಗಾಗಿ ಸೆರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾವನ್ನು ಅದು ಎದುರು ನೋಡುತ್ತಿರುವಂತೆಯೇ ಹೊಸ ಲಸಿಕೆಗಳ ಸರಬರಾಜಿಗಾಗಿ ಬೀಜಿಂಗ್‌ನತ್ತಲೂ ಮುಖ ಮಾಡಿದೆ.

ದೆಹಲಿಯೊಂದಿಗೆ ಮಾತುಕತೆ ನಡೆಸುವಲ್ಲಿ ನೇಪಾಳದ ಆರೋಗ್ಯ ಸಚಿವ ಹೃದಯೇಶ್ ತ್ರಿಪಾಠಿ ಮಗ್ನರಾಗಿದ್ದರೆ, ಇತ್ತೀಚೆಗೆ ಕಠ್ಮಂಡುವಿನಲ್ಲಿರುವ ಬೀಜಿಂಗ್ ರಾಯಭಾರಿಗಳು, ಉತ್ತರದ ನೆರೆರಾಷ್ಟ್ರದಿಂದ ಉಡುಗೊರೆಯಾಗಿ ದೊರೆಯುತ್ತಿರುವ ಸಿನೊಫಾರ್ಮ್ ಅಭಿವೃದ್ಧಿಪಡಿಸಿದ 800,000 ಲಸಿಕೆಗಳನ್ನು ತರಲು ಸರ್ಕಾರ ಚೀನಾಕ್ಕೆ ವಿಮಾನ ಕಳುಹಿಸುತ್ತಿದೆ ಎಂದು ಹೇಳಿದ್ದಾರೆ .

ಆದರೆ ಇದಿಷ್ಟೇ ಸಾಲದು. ನೇಪಾಳ ತನ್ನ ಸುಮಾರು 3 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿ ಮಂದಿಗಾದರೂ ಈ ವರ್ಷ ಲಸಿಕೆ ನೀಡಲು ಯೋಜನೆ ರೂಪಿಸಿದೆ . ಇದರ ಅರ್ಥ ಏನೆಂದರೆ ದೇಶದ ಇಡೀ ಜನರು 18ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಮುಂದಿನ ಜನವರಿಯೊಳಗೆ ಚುಚ್ಚುಮದ್ದು ಪಡೆಯಲೇಬೇಕು . ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇಪಾಳಕ್ಕೆ ಸಹಾಯ ಮಾಡಬಹುದು ಎಂದು ಆರೋಗ್ಯ ಸಚಿವ ಹೃದಯೇಶ್ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ. ಡಿಜಿಟಲ್‌ ಸುದ್ದಿ ಪತ್ರಿಕೆ setopati.comಗೆ ನೀಡಿದ ಹೇಳಿಕೆಯಲ್ಲಿ “ ಈವರೆಗಿನ ಲಸಿಕೆ ಸರಬರಾಜಿಗೆ ಸಂಬಂಧಿಸಿದಂತೆ ನೇಪಾಳ ಸೆರಮ್‌ನೊಂದಿಗೆ ದೀರ್ಘಕಾಲೀನ ಒಪ್ಪಂದ ಮಾಡಿಕೊಂಡಿದೆ . ಅದು ಹಿಂದೆಯೂ ಲಸಿಕೆಗಳನ್ನು ನಮಗೆ ಪೂರೈಸಿತ್ತು . ಮತ್ತು ಈಗ ಕೂಡ ಇದು ನಮಗೆ ಸಾಕಷ್ಟು ಕೋವಿಶೀಲ್ಡ್ ಲಸಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ” ಎಂದಿದ್ದಾರೆ.

ನೇಪಾಳ ಚುಚ್ಚುಮದ್ದಿಗೆ ಸಮಂಜಸವಾದ ಬೆಲೆ ನಿರೀಕ್ಷಿಸುತ್ತಿದ್ದು ಆರಂಭದಲ್ಲಿ ಸೆರಮ್‌ ಪ್ರತಿ ಡೋಸ್‌ಗೆ 4 ಅಮೆರಿಕನ್‌ ಡಾಲರ್‌ ವಿಧಿಸುತ್ತಿತ್ತು. ಇತರೆ ಲಸಿಕೆಗಳಿಗೆ ಹೋಲಿಸಿದರೆ ಅದು ಉತ್ತಮ ಬೆಲೆ ಎಂದು ಅಧಿಕಾರಿಗಳು ಭಾವಿಸಿದ್ದರು. ಹೆಚ್ಚಿನ ಕೋವಿಶೀಲ್ಡ್‌ ಸರಬರಾಜಿಗಾಗಿ ನಿರೀಕ್ಷೆ ಹೆಚ್ಚಾದಂತೆ ನೇಪಾಳದ ಆರೋಗ್ಯ ಅಧಿಕಾರಿಗಳು ಸ್ವಲ್ಪ ಅಸಮಾಧಾನಗೊಂಡಿದ್ದಾರೆ. ಕೋವಿಶೀಲ್ಡ್‌ ಲಸಿಕೆ ದುಬಾರಿಯಾಗುತ್ತಿದೆ . ಈಗ ಅದರ ಬೆಲೆ ಹೆಚ್ಚಾಗಿದ್ದು ಪ್ರತಿ ಡೋಸ್‌ಗೆ ಡಾಲರ್‌ 5ಕ್ಕೆ ದೊರೆಯುತ್ತಿದೆ. “ ಸರಬರಾಜು ಮಾಡುವ ಏಜೆಂಟರಿಗೆ ಶೇ 10 ರಷ್ಟು ಕಮಿಷನ್ ಶುಲ್ಕ ಇರುವುದರಿಂದ ಇದು ದುಬಾರಿಯಾಗಿದೆ ” ಎಂದು ಹೇಳಿರುವ ಆರೋಗ್ಯ ಸಚಿವ ತ್ರಿಪಾಠಿ “ ನಾವು ಆ ರೀತಿಯ ಆಯೋಗದ ಶುಲ್ಕವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಸ್ವಲ್ಪ ವಿಳಂಬವಾಗುತ್ತಿದೆ ” ಎಂದಿದ್ದಾರೆ .

ಮಾರ್ಚ್ 15 ರ ಹೊತ್ತಿಗೆ, ನೇಪಾಳವು 22 ಲಕ್ಷ ಪಿಸಿಆರ್ ಪರೀಕ್ಷೆಗಳನ್ನು ನಡೆಸಿತು. ಅದರಲ್ಲಿ 2,75,000 ಕೊರೊನಾ ದೃಢಪಟ್ಟ ಪ್ರಕರಣಗಳು ಬೆಳಕಿಗೆ ಬಂದವು. 3,014 ಮಂದಿ ಸಾವನ್ನಪ್ಪಿದ್ದರು. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಮರಳುತ್ತಿರುವ ಜನರಲ್ಲಿ ಹೊಸ ಕೊರೊನಾ ಪ್ರಕರಣಗಳಿಂದಾಗಿ ಎರಡನೇ ಅಲೆಯ ಭೀತಿ ಹೆಚ್ಚಾಗಿದೆ .

- ಕಠ್ಮಂಡುವಿನಿಂದ ಸುರೇಂದ್ರ ಫುಯುಲ್

ABOUT THE AUTHOR

...view details