ಮ್ಯಾಗ್ಡಿ (ನೇಪಾಳ):ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ರಾಮ ಮತ್ತು ಸೀತೆಯ ವಿಗ್ರಹ ಕೆತ್ತನೆಗೆ ಬೇಕಾದ ವಿಶಿಷ್ಟವಾದ ಶಾಲಿಗ್ರಾಮ್ ಕಲ್ಲುಗಳನ್ನು ನೇಪಾಳದಿಂದ ತರಲಾಗುತ್ತಿದೆ. ಅಲ್ಲಿನ ಮ್ಯಾಗ್ಡಿ ಮತ್ತು ಮುಸ್ತಾಂಗ್ ಜಿಲ್ಲೆಯ ಕಾಳಿ ಗಂಡಕಿ ನದಿಯ ದಡದಲ್ಲಿ ಮಾತ್ರ ಕಂಡುಬರುವ ಈ ವಿಶೇಷ 2 ಶಾಲಿಗ್ರಾಮ್ ಕಲ್ಲಗಳನ್ನು ಅಯೋಧ್ಯೆ ರಾಮನಿಗಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ನೇಪಾಳದ ಮಾಜಿ ಉಪ ಪ್ರಧಾನಿ ಬಿಮಲೇಂದ್ರ ನಿಧಿ ಅವರು ಶಾಲಿಗ್ರಾಮ್ ಕಲ್ಲನ್ನು ಕಳುಹಿಸಲು ನೆರವು ನೀಡಿದ್ದಾರೆ.
"ಕಾಳಿ ಗಂಡಕಿ ನದಿಯ ದಡದಲ್ಲಿ ಕಂಡುಬರುವ ಈ ಕಲ್ಲುಗಳು ಪ್ರಪಂಚದಲ್ಲಿಯೇ ಪ್ರಸಿದ್ಧ ಮತ್ತು ಬಹಳ ಅಮೂಲ್ಯವಾಗಿವೆ. ಈ ಕಲ್ಲುಗಳು ಭಗವಾನ್ ವಿಷ್ಣುವಿನ ಸಂಕೇತವೆಂಬ ನಂಬಿಕೆ ಇದೆ. ಶ್ರೀರಾಮನು ಭಗವಾನ್ ವಿಷ್ಣುವಿನ ಅವತಾರವಾಗಿದ್ದಾನೆ. ಅದಕ್ಕಾಗಿಯೇ ಈ ಕಲ್ಲಿನಿಂದಲೇ ಅಯೋಧ್ಯೆಯಲ್ಲಿನ ರಾಮಲಲ್ಲಾ ಮೂರ್ತಿಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಈ ಕಲ್ಲಿಗಾಗಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಚಂಪತ್ ರೈ ಅವರು ವಿನಂತಿಸಿದ್ದರು. ನಾನು ಆಸಕ್ತಿಯಿಂದ ಕಲ್ಲನ್ನು ಕಳುಹಿಸುತ್ತಿದ್ದೇನೆ ಎಂದು ಉಪ ಪ್ರಧಾನಿ ಬಿಮಲೇಂದ್ರ ನಿಧಿ ತಿಳಿಸಿದರು.
ಸೀತಾದೇವಿ ಜನ್ಮಸ್ಥಳ ಎಂದೇ ನಂಬಲಾದ ಮ್ಯಾಗ್ಡಿಯ ಜಾನಕಿ ದೇವಸ್ಥಾನದ ಅರ್ಚಕರಾದ ರಾಮ್ ತಪೇಶ್ವರ್ ಮತ್ತು ನಾನು ಅಯೋಧ್ಯೆ ಭೇಟಿ ನೀಡಿದ್ದೆವು. ಟ್ರಸ್ಟ್‌ನ ಅಧಿಕಾರಿಗಳು ಮತ್ತು ಅಯೋಧ್ಯೆಯ ಇತರ ಸಂತರೊಂದಿಗೆ ಸಭೆ ನಡೆಸಿ, ಶಾಲಿಗ್ರಾಮ್ ಕಲ್ಲಿನಿಂದ ರಾಮನ ವಿಗ್ರಹ ರೂಪಿಸಲು ಕೋರಿದ ಬಳಿಕ, ಈಗ ಕಲ್ಲನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.