ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು (ಎನ್‌ಎಂಎಂಎಲ್) ಪ್ರಧಾನಮಂತ್ರಿ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಪಿಎಂಎಂಎಲ್) ಎಂದು ಮರುನಾಮಕರಣ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ''ನೆಹರು ಅವರು ಮಾಡಿದ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆಯೇ ಹೊರತು, ಅವರ ಹೆಸರಿಗಾಗಿ ಮಾತ್ರ ಅಲ್ಲ'' ಎಂದು ಹೇಳಿದ್ದಾರೆ.
ಎರಡು ದಿನಗಳ ಲೇಹ್ ಭೇಟಿಗೆ ತೆರಳುವ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ''ನೆಹರು ಅವರ ಕಾರ್ಯಗಳು ಹೆಸರು ಮಾಡಿವೆ. ಆದರೆ ನೆಹರು ಅವರ ಹೆಸರಿಗಾಗಿ ಅಲ್ಲ'' ಎಂದು ಹೇಳಿದರು.
ಬಿಜೆಪಿ- ವಿರೋಧ ಪಕ್ಷಗಳ ನಡುವೆ ವಾಗ್ವಾದ:ನೆಹರೂ ಸ್ಮಾರಕ ವಸ್ತುಸಂಗ್ರಹಾಲಯವನ್ನು ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಮರುನಾಮಕರಣ ಮಾಡುವ ಬಗ್ಗೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ಆಗಾಗ ವಾಗ್ವಾದ ನಡೆಯುತ್ತಿವೆ.
ಕೇಂದ್ರ ಸರ್ಕಾರಕ್ಕೆ ತರಾಟೆ:ರಾಷ್ಟ್ರ ರಾಜಧಾನಿಯ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (ಎನ್‌ಎಂಎಂಎಲ್) ಅಧಿಕೃತ ಹೆಸರನ್ನು ಬದಲಾಯಿಸಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ''ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜವಾಹರಲಾಲ್ ನೆಹರು ಅವರು ನೀಡಿದ್ದ ಮಹಾನ್ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.
ಜೈರಾಮ್ ರಮೇಶ್ ಗರಂ:ಈ ಹಿಂದೆ, ಟ್ವಿಟರ್ನ ಅಧಿಕೃತ ಖಾತೆಯಲ್ಲಿ ಜೈರಾಮ್ ರಮೇಶ್, ''ಇಂದಿನಿಂದ ಪ್ರತಿಷ್ಠಿತ ಸಂಸ್ಥೆಗೆ ಹೊಸ ಹೆಸರು ಬಂದಿದೆ ಎಂದು ಬರೆದಿದ್ದರು. ವಿಶ್ವವಿಖ್ಯಾತ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್‌ಎಂಎಂಎಲ್) ಇದ್ದಿದ್ದು, ಈಗ ಪ್ರಧಾನ ಮಂತ್ರಿ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿ (ಪಿಎಂಎಂಎಲ್) ಮಾರ್ಪಟ್ಟಿದೆ. ಶ್ರೀ ಮೋದಿಯವರು ಭಯ, ತೊಡಕುಗಳು ಮತ್ತು ಅಭದ್ರತೆಗಳ ದೊಡ್ಡ ಗುಂಪನ್ನು ಹೊಂದಿದ್ದಾರೆ. ವಿಶೇಷವಾಗಿ ನಮ್ಮ ಮೊದಲ ಮತ್ತು ದೀರ್ಘಾವಧಿಯ ಪ್ರಧಾನಿ (ಜವಾಹರಲಾಲ್ ನೆಹರು) ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿ ಮಾಡಿದ್ದಾರೆ. ಅವರು(ಪ್ರಧಾನಿ ನರೇಂದ್ರ ಮೋದಿ) ನೆಹರು ಪರಂಪರೆಯನ್ನು ನಿರಾಕರಿಸುವ, ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶಪಡಿಸುವ ಅಂಶದ ಕಾರ್ಯಸೂಚಿ ಹೊಂದಿದ್ದಾರೆ ಎಂದು ಟ್ವೀಟ್ನಲ್ಲಿ ಆಕ್ರೋಶ ಹೊರ ಹಾಕಿದ್ದರು.
ಪ್ರಧಾನಮಂತ್ರಿ ಮ್ಯೂಸಿಯಂ ಮತ್ತು ಲೈಬ್ರರಿ ಅಧಿಕೃತ ಉದ್ಘಾಟನೆ:ಕೇಂದ್ರ ಸರ್ಕಾರ ಸೋಮವಾರ, ಅಧಿಕೃತವಾಗಿ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು (ಎನ್‌ಎಂಎಂಎಲ್) ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಪಿಎಂಎಂಎಲ್) ಎಂದು ಮರುನಾಮಕರಣ ಮಾಡಿದೆ. ಪ್ರಧಾನ ಮಂತ್ರಿ ಮ್ಯೂಸಿಯಂ ಮತ್ತು ಲೈಬ್ರರಿ (ಪಿಎಂಎಂಎಲ್) ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಎ.ಸೂರ್ಯ ಪ್ರಕಾಶ್, ಈ ಬಗ್ಗೆ ಬುಧವಾರ ಮಾತನಾಡಿ, ಹೊಸ ಮ್ಯೂಸಿಯಂ ರಾಷ್ಟ್ರಕ್ಕೆ ಜವಾಹರಲಾಲ್ ನೆಹರು ಅವರ ಸಾಧನೆಗಳು ಮತ್ತು ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಇದರ ಬಗ್ಗೆ ಅನುಮಾನ ಇರುವವರು ನೋಡಬೇಕು ಎಂದರು.
ಇದನ್ನೂ ಓದಿ:ಇಂದಿನಿಂದ ರಾಹುಲ್ ಗಾಂಧಿ 2 ದಿನಗಳ ಲಡಾಖ್ ಪ್ರವಾಸ ಸಾಧ್ಯತೆ