ಚಾರ್ಖಿ ದಾದ್ರಿ (ಹರಿಯಾಣ): ಉಕ್ರೇನ್ ಮತ್ತು ರಷ್ಯಾ ನಡುವೆ ನಾಲ್ಕು ದಿನಗಳಿಂದ ಯುದ್ಧ ನಡೆಯುತ್ತಿದೆ. ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಭಾರತ ಸರ್ಕಾರದ ಪರವಾಗಿ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಹರಿಯಾಣ ಮೂಲದ ಯುವತಿ ಮಾನವೀಯತೆಯ ಸಂದೇಶ ಸಾರಿದ್ದಾಳೆ.
ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ನೇಹಾ ಸಾಂಗ್ವಾನ್ ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ನೇಹಾಳ ತಂದೆ ಭಾರತೀಯ ಸೇನೆಯಲ್ಲಿದ್ದು, ಎರಡು ವರ್ಷಗಳ ಹಿಂದೆ ಹುತಾತ್ಮರಾಗಿದ್ದರು. ಇದೀಗ ಉಕ್ರೇನ್‌ನಲ್ಲಿ ನೇಹಾಳಿಗೆ ಬಾಡಿಗೆ ನೀಡಿರುವ ಮನೆಯ ಮಾಲೀಕ ಯುದ್ಧಕ್ಕೆ ಸೇರಿದ್ದಾರೆ. ಹೀಗಾಗಿ ಅವರ ಮೂವರು ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ನೇಹಾ ಈಗ ಭಾರತಕ್ಕೆ ಹಿಂದಿರುಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಎರಡು ವರ್ಷದ ಹಿಂದೆ ಉಕ್ರೇನ್ ರಾಜಧಾನಿ ಕೀವ್ನಲ್ಲಿ ವ್ಯಾಸಂಗಕ್ಕೆ ತೆರಳಿದ್ದ ನೇಹಾಳಿಗೆ ಹಾಸ್ಟೆಲ್ ಸಿಕ್ಕಿರಲಿಲ್ಲ. ಆ ವೇಳೆ ಎಂಜಿನಿಯರ್ ಒಬ್ಬರು ನೇಹಾಳಿಗೆ ಮನೆ ಬಾಡಿಗೆ ನೀಡಿದ್ದರು. ಇದೀಗ ಅವರು ಯುದ್ಧಕ್ಕೆ ಸೇರಿಕೊಂಡಿದ್ದು, ಅವರ ಹೆಂಡತಿ ಹಾಗೂ ಮಕ್ಕಳು ಬಂಕರ್ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾನು ಅವರನ್ನು ಬಿಟ್ಟು ಬರುವುದಿಲ್ಲ, ನಾನು ಉಕ್ರೇನ್‌ನಲ್ಲಿಯೇ ಇರಲು ನಿರ್ಧರಿಸಿದ್ದೇನೆ ಎಂದು ನೇಹಾ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಿಂದ ದೆಹಲಿಗೆ ಬಂದಿಳಿದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು
ಈ ವಿಚಾರವನ್ನು ನೇಹಾ ಅವರ ಚಿಕ್ಕಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಯುವತಿಯ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ. ಹಾಗೆಯೇ ನೇಹಾ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಇಚ್ಛಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.