ಉಮರಿಯಾ( MP):ಮಧ್ಯ ಪ್ರದೇಶದ ಶಹ್ದೋಲ್ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೆರಿಗೆಯಾದ 24 ಗಂಟೆಯೊಳಗೆ ಯಾವುದೇ ಸಹಾಯವಿಲ್ಲದೇ ಮಹಿಳೆಗೆ ಆಸ್ಪತ್ರೆಯಿಂದ ತೆರಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ ಕಾರಣ, ಹೆರಿಗೆಯಾದ ಮಹಿಳೆ ಕಾಲ್ನಡಿಗೆ ಮೂಲಕವೇ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಬೆಟ್ಟ ಹತ್ತಿ ಸುಮಾರು 3 ಕಿಲೋಮೀಟರ್ ದೂರದ ತನ್ನ ಮನೆಯನ್ನು ಸೇರಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಹೆರಿಗೆ ನಂತರ ಕಾಲ್ನಡಿಗೆ ಮೂಲಕವೇ ಮನೆ ಸೇರಿದ ಮಹಿಳೆ ಹೌದು, ಮರ್ದಾರಿ ಗ್ರಾಮದ ನಿವಾಸಿ ಬಿಸಾರ್ತಿ ಬಾಯಿ ಎಂಬಾಕೆ ನೌರೋಜಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ನಂತರ ಮನೆಗೆ ತಲುಪಲು ಜನನಿ ಎಕ್ಸ್ಪ್ರೆಸ್ ಸೇವೆ ಒದಗಿಸುವಂತೆ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದಾಗ ಅವರು ವಾಹನ ಕೆಟ್ಟುಹೋಗಿದೆ ಎಂಬ ಕಾರಣ ನೀಡಿದ್ದರಿಂದ ಮಹಿಳೆಯು ಬೇರೆ ದಾರಿ ಕಾಣದೆ ಕಾಲ್ನಡಿಗೆಯಲ್ಲೇ ಮನೆ ತಲುಪಿದ್ದಾಳೆ.
ಬಿಸಾರ್ತಿ ಬಾಯಿ ಹಾಗೂ ಆಕೆಯ ತಾಯಿ ಚೈತಿ ಬೈಗಾ ತಮ್ಮ ಎರಡು ದಿನದ ಮಗುವನ್ನು ಕೆರದುಕೊಂಡು ಚಳಿಯನ್ನು ಲೆಕ್ಕಿಸದೇ ನೌರೋಜಾಬಾದ್ನಿಂದ ಮರ್ದಾರಿಗೆ ಕಾಲು ನಡಿಗೆಯಲ್ಲೇ ಸಾಗಿ ಮನೆ ತಲುಪಿದ್ದಾರೆ.
ದಾರಿ ಮಧ್ಯದಲ್ಲಿ ಬಿಸಾರ್ತಿ ಬಾಯಿಯ ಸ್ಥಿತಿ ಹದಗೆಟ್ಟರೂ ದಾರಿ ಮಧ್ಯೆ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಸಾಗಿದ್ದಾರೆ. ಮಾರ್ಗ ಮಧ್ಯದಲ್ಲಿ ಕೆಲವರು ಮೋಟಾರ್ ಬೈಕ್ನಲ್ಲಿ ಡ್ರಾಪ್ ಮಾಡುವ ಮೂಲಕ ಸಹಾಯ ಮಾಡಿದರೂ ಅಂತಿಮವಾಗಿ ಕಾಲ್ನಡಿಗೆ ಮೂಲಕವೇ ಬೆಟ್ಟ ಹತ್ತಿ ಮನೆ ಸೇರಿದ್ದಾರೆ.
ಸಾಲು ಸಾಲು ಮಕ್ಕಳ ಸಾವಿನ ಕಾರಣದಿಂದ ಶಾಹ್ದೋಲ್ ಜಿಲ್ಲಾಸ್ಪತ್ರೆ ಹೆಚ್ಚು ಟೀಕೆಗೆ ಒಳಪಟ್ಟಿದೆ. ಇಷ್ಟಾದರೂ ಆಸ್ಪತ್ರೆಗಳ ನಡವಳಿಕೆಯಲ್ಲಿ ಮಾತ್ರ ಯಾವುದೇ ಸುಧಾರಣೆ ಕಂಡುಬಂದಿಲ್ಲ.
ಘಟನೆ ಬಗ್ಗೆ ತಿಳಿದ ತಕ್ಷಣ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಚಿತ್ರ ಭರದ್ವಾಜ್ ಅವರು ಆರೋಗ್ಯ ಇಲಾಖೆಯವರೊಂದಿಗೆ ಸಭೆ ನಡೆಸಿದ್ದಾರೆ. ಸಭೆ ನಂತರ ಅಧಿಕಾರಿಗಳು ಸರ್ಕಾರಿ ಮಟ್ಟದಲ್ಲಿ ಪರಿಶೀಲನೆ ನಡೆಸಿದಾಗ, ಮಕ್ಕಳ ಸಾವಿಗೆ ಆಸ್ಪತ್ರೆಗಳ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ.