ನವದೆಹಲಿ : ನೀಟ್-ಪಿಜಿ 2021 ಕೌನ್ಸೆಲಿಂಗ್ ವಿಳಂಬ ವಿರುದ್ಧ ರೆಸಿಡೆಂಟ್ ವೈದ್ಯರ ಪ್ರತಿಭಟನೆ ಭಾರಿ ಹೈಡ್ರಾಮಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ವರ್ತನೆಯನ್ನು ವಿರೋಧಿಸಿ ನಾಳೆ ಬೆಳಗ್ಗೆ 8 ಗಂಟೆಯಿಂದ ದೇಶಾದ್ಯಂತ ಎಲ್ಲ ಆರೋಗ್ಯ ಸೇವೆಗಳನ್ನು ಬಹಿಷ್ಕರಿಸುವುದಾಗಿ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ ಘೋಷಿಸಿದೆ.
ನೀಟ್ ಪಿಜಿ 2021 ಕೌನ್ಸೆಲಿಂಗ್ ವಿಳಂಬದ ಕುರಿತು ದೆಹಲಿಯಲ್ಲಿ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ವೈದ್ಯರ ಪ್ರತಿಭಟನೆ ನಿನ್ನೆ ನಾಟಕೀಯ ತಿರುವು ಪಡೆದುಕೊಂಡಿತ್ತು. ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡಿದಿತ್ತು.
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ನಾವು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನೆಗೆ ಪ್ರಯತ್ನಿಸಿದೆವು. ಆದರೆ, ತಕ್ಷಣ ಪೊಲೀಸರು ಮುಂದೆ ಸಾಗದಂತೆ ತಡೆದರು. ಈ ವೇಳೆ ನಮ್ಮ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ನಮ್ಮಲ್ಲಿ ಅನೇಕರನ್ನು ಬಂಧಿಸಲಾಗಿದೆ ಎಂದು ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಮನೋಜ್ ಆರೋಪಿಸಿದ್ದಾರೆ.