ನವದೆಹಲಿ: ಸೋಮವಾರ ಮಧ್ಯಾಹ್ನ ವೈದ್ಯರ ವಿರುದ್ಧ ಪೊಲೀಸರು ಕೈಗೊಂಡ ಕ್ರಮದ ನಂತರ ಪ್ರತಿಭಟನಾನಿರತ ನಿವಾಸಿ ವೈದ್ಯರು ದೆಹಲಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಕರೆ ನೀಡಿದ್ದಾರೆ.
ಪಿಜಿ ನೀಟ್ ಕೌನ್ಸೆಲಿಂಗ್ ವಿಳಂಬ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ರೆಸಿಡೆಂಟ್ ವೈದ್ಯರು ಸುಪ್ರೀಂ ಕೋರ್ಟ್‌ನತ್ತ ತೆರಳುತ್ತಿದ್ದಾಗ ಮಧ್ಯಾಹ್ನ ಐಟಿಒ ಬಳಿ ಪೊಲೀಸರು ತಡೆದರು. ಈ ವೇಳೆ, ಸಾವಿರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ, ಇಂದಿನಿಂದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ನಾವು ಈ ದೌರ್ಜನ್ಯವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು FORDA ಪ್ರತಿನಿಧಿಗಳು ಮತ್ತು ನಿವಾಸಿ ವೈದ್ಯರು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ NEET PG ಕೌನ್ಸೆಲಿಂಗ್ 2021 ಅನ್ನು ತ್ವರಿತಗೊಳಿಸಲು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ 'ಕೊರೊನಾ ವಾರಿಯರ್ಸ್' ಆಗಿರುವ ನಿವಾಸಿ ವೈದ್ಯರನ್ನು ಪೊಲೀಸರು ಕ್ರೂರವಾಗಿ ಥಳಿಸಿದ್ದಾರೆ. ರಾಷ್ಟ್ರ ಈ ಕೃತ್ಯವನ್ನು ಖಂಡಿಸಬೇಕು ಮತ್ತು ಬೆಂಬಲಕ್ಕೆ ಮುಂದೆ ಬರಬೇಕು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರ್‌ಎಂಎಲ್ ಆಸ್ಪತ್ರೆಯ ಆರ್‌ಡಿಎ ಉಪಾಧ್ಯಕ್ಷ ಡಾ ಅಜಯ್ ಕುಮಾರ್, ದೆಹಲಿ ಪೊಲೀಸರು ಸಾವಿರಕ್ಕೂ ಹೆಚ್ಚು ವೈದ್ಯರನ್ನು ಬಂಧಿಸಿದ್ದಾರೆ. ಇಂತಹ ಅನಾಗರಿಕ ಕ್ರಮಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.