ನವದೆಹಲಿ: ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (FORDA) ನಿಯೋಗ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನಡುವಿನ ಸಭೆ ಇಲ್ಲಿನ ನಿರ್ಮಾಣ್ ಭವನದಲ್ಲಿ ನಿನ್ನೆ ನಡೆಯಿತು. ಆದರೆ ಈ ಸಭೆ ವೈದ್ಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.
ನೀಟ್-ಪಿಜಿ 2021 ಕೌನ್ಸೆಲಿಂಗ್ ವಿಳಂಬದ ಕುರಿತು ದೆಹಲಿಯಲ್ಲಿ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ವೈದ್ಯರ ಪ್ರತಿಭಟನೆ ನಾಟಕೀಯ ತಿರುವು ಪಡೆದುಕೊಂಡಿತ್ತು. ಇದು ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಾನಿಕ ವೈದ್ಯರು ಘಟನೆ ಖಂಡಿಸಿ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನೆಗೆ ಮುಂದಾದಾಗ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಲವರನ್ನು ವಶಕ್ಕೆ ಪಡೆದರು ಎಂದು ಪೊಲೀಸ್ ಅಧಿಕಾರಿ ಸುಮನ್ ಗೋಯಲ್ ಹೇಳಿದ್ದರು.
ಇದನ್ನೂ ಓದಿ:ಡೀಸೆಲ್ ಖಾಲಿಯಾಗಿದ್ದಕ್ಕೆ ಟ್ರಕ್ ಚಾಲಕನ ಅಜಾಗರೂಕತೆ, ದುಸ್ಸಾಹಸ: ಮೂವರ ದುರ್ಮರಣ
'ನಾವು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನೆಗೆ ಪ್ರಯತ್ನಿಸಿದೆವು. ಆದರೆ, ತಕ್ಷಣ ಪೊಲೀಸರು ಮುಂದೆ ಸಾಗದಂತೆ ತಡೆದರು. ಈ ವೇಳೆ ನಮ್ಮ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ನಮ್ಮಲ್ಲಿ ಅನೇಕರನ್ನು ಬಂಧಿಸಲಾಗಿದೆ' ಎಂದು ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಮನೋಜ್ ಆರೋಪಿಸಿದ್ದಾರೆ.
ಫೋರ್ಡಾ(FORDA) ಅಧ್ಯಕ್ಷ ಡಾ. ಮನೀಶ್ ಮತ್ತು ಇತರ ಕೆಲವು ಪ್ರತಿಭಟನಾನಿರತ ಸ್ಥಾನಿಕ ವೈದ್ಯರು ನಿನ್ನೆ (ಮಂಗಳವಾರ) ರಾತ್ರಿ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ಜೊತೆ ಸಭೆ ನಡೆಸಿದರು. ಈ ವೇಳೆ ಸಚಿವರು ಸಾರ್ವಜನಿಕ ಹಿತಾಸಕ್ತಿಯಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಆದರೆ, ಬೇಡಿಕೆ ಈಡೇರಿಸದೆ ಸಚಿವರು ಭರವಸೆಯ ಮಾತುಗಳನ್ನಾಡಿದ್ದು ವೈದ್ಯರಿಗೆ ಸಮಾಧಾನ ತಂದಿಲ್ಲ. ಈ ಹಿನ್ನೆಲೆಯಲ್ಲಿ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸಲು ವೈದ್ಯರು ನಿರ್ಧರಿಸಿದ್ದಾರೆ.