ಇಂದೋರ್ (ಮಧ್ಯಪ್ರದೇಶ):ವೈದ್ಯಕೀಯ ಕಾಲೇಜುಗಳ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈನಲ್ಲಿ ನಡೆಸಲಾದ ನೀಟ್ ಪರೀಕ್ಷೆಯು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರವೇಶ ಪರೀಕ್ಷೆಯ ಫಲಿತಾಂಶ ಬಂದಾಗ ಓರ್ವ ವಿದ್ಯಾರ್ಥಿನಿ ಶೂನ್ಯ ಅಂಕ ಪಡೆದಿದ್ದಾಳೆ. ಅಲ್ಲದೇ ಆಕೆ ಈ ವಿಷಯವಾಗಿ ಮಧ್ಯಪ್ರದೇಶದ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಅಷ್ಟೇ ಅಲ್ಲ ಈ ಪರೀಕ್ಷೆಯಲ್ಲಿ ಮೋಸ ನಡೆದಿದ್ದು, ಒಎಂಆರ್ ಶೀಟ್ನನ್ನು ಬದಲಾಯಿಸಿರುವ ಶಂಕೆಯನ್ನೂ ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದಾಳೆ.
ಸರ್ಕಾರದ ಉತ್ತರ ಕೇಳಿದ ಹೈಕೋರ್ಟ್: ವಿದ್ಯಾರ್ಥಿನಿ ಲಿಪಾಕ್ಷಿ ಪಾಟಿದಾರ್‌ಗೆ ಶೂನ್ಯ ಅಂಕ ನೀಡಿದ ಪ್ರಕರಣದ ವಿಚಾರಣೆ ವೇಳೆ, ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ಪೀಠದ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರು ವಿದ್ಯಾರ್ಥಿನಿಯ ಮೂಲ ದಾಖಲೆ ನೀಡುವಂತೆ ಎನ್ಟಿಎಗೆ ಕೇಳಿದೆ. ಬಳಿಕ ಕೇಂದ್ರ ಸರ್ಕಾರದ ಪರ ವಕೀಲರು ವಿದ್ಯಾರ್ಥಿನಿಯ ಮೂಲ ದಾಖಲೆ ನೀಡಲು ಒಂದು ವಾರ ಕಾಲಾವಕಾಶವನ್ನು ಕೋರಿದರು. ಇದಕ್ಕೆ ನ್ಯಾಯಾಲಯ ಒಪ್ಪಿಕೊಂಡು, ಸೆಪ್ಟೆಂಬರ್ 30ಕ್ಕೆ ವಿಚಾರಣೆಯನ್ನು ಮುಂದೂಡಿತು. ಅಲ್ಲದೇ ಈ ವಿಷಯವಾಗಿ ಸರ್ಕಾರ ಸೆ.30 ರೊಳಗೆ ಉತ್ತರವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ನೀಟ್ ಪರೀಕ್ಷೆ: ದೇಶಕ್ಕೆ ನಾಲ್ಕನೇ ರ‍್ಯಾಂಕ್ ಪಡೆದ ಬೆಳಗಾವಿಯ ರುಚಾ
ಒಎಂಆರ್ ಶೀಟ್ ಬದಲಾವಣೆ ಶಂಕೆ:ವಿದ್ಯಾರ್ಥಿನಿ ಲಿಪಾಕ್ಷಿ ಪಾಟಿದಾರ್ ಪರ ವಕೀಲ ಧರ್ಮೇಂದ್ರ ಚೇಲಾವತ್ ಮಾತನಾಡಿ, ಜುಲೈ 17ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಲಿಪಾಕ್ಷಿ 200ರಲ್ಲಿ 161 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವರು ಪರೀಕ್ಷೆಯಲ್ಲಿ ಪಾಸ್ ಆಗುವ ವಿಶ್ವಾಸವನ್ನು ಹೊಂದಿದ್ದರು. ಆದರೆ, ಫಲಿತಾಂಶ ಬಂದಾಗ ಅವರಿಗೆ ಶೂನ್ಯ ಅಂಕಗಳು ಬಂದಿವೆ. ವಿದ್ಯಾರ್ಥಿನಿ ನನಗೆ OMR ಶೀಟ್ ಕಳುಹಿಸಿದಾಗ, ಅದು ಸಂಪೂರ್ಣವಾಗಿ ಖಾಲಿಯಾಗಿತ್ತು ಮತ್ತು ಅದರಲ್ಲಿ ಒಂದೇ ಒಂದು ಉತ್ತರ ದಾಖಲಾಗಿರಲಿಲ್ಲ. ಹಾಗಾಗಿ ಒಎಂಆರ್ ಶೀಟ್ ಬದಲಾವಣೆ ಮಾಡಿರುವ ಶಂಕೆಯನ್ನು ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾರು ಲಿಪಾಕ್ಷಿ ಪಾಟಿದಾರ್ ?: ಅಗರ-ಮಾಳವಾ ಜಿಲ್ಲೆಯ ನಲ್ಖೇಡಾ ಬಳಿಯ ಭೆಸೋಡಾ ಗ್ರಾಮದಲ್ಲಿ ವಾಸಿಸುತ್ತಿರುವ ರೈತನ ಮಗಳು ಲಿಪಾಕ್ಷಿ ಪಾಟಿದಾರ್. ಇವರು 10 ಮತ್ತು 12ನೇ ತರಗತಿಯಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಅವರು ವೈದ್ಯೆಯಾಗುವ ಕನಸನ್ನು ಹೊಂದಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಇವರಿಗೆ ಶೂನ್ಯ ಫಲಿತಾಂಶ ಬಂದಿದ್ದು, ಇದೀಗ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.