ಕೋಟಾ (ರಾಜಸ್ಥಾನ): ಉನ್ನತ ಶಿಕ್ಷಣ ಪರೀಕ್ಷೆಗಳ ಕೋಚಿಂಗ್ ಕೇಂದ್ರವಾದ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಮತ್ತೊಬ್ಬ ನೀಟ್ ಆಕಾಂಕ್ಷಿ ಸಾವಿಗೆ ಶರಣಾಗಿದ್ದಾರೆ. ಜಾರ್ಖಂಡ್ ಮೂಲದ 16 ವರ್ಷದ ವಿದ್ಯಾರ್ಥಿನಿಯ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಚಾ ಸಿನ್ಹಾ ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್) ಇವರು ಕೋಟಾದಲ್ಲಿ ತಯಾರಿ ನಡೆಸುತ್ತಿದ್ದರು. ಇಲ್ಲಿನ ವಿಜ್ಞಾನ ನಗರದ ಹಾಸ್ಟೆಲ್ ಕೊಠಡಿಯಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:IIT Aspirant: ಐಐಟಿ ಕೋಚಿಂಗ್ ಪಡೆಯುತ್ತಿದ್ದ ಯುವಕ ಆತ್ಮಹತ್ಯೆ: ಭೇಟಿಗೆ ಬಂದಿದ್ದ ಪೋಷಕರಿಗೆ ಆಘಾತ
''ರಿಚಾ ಸಾವಿನ ಬಗ್ಗೆ ರಾತ್ರಿ 10:30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಿಂದಲೇ ನಮಗೆ ಈ ಮಾಹಿತಿ ದೊರೆತಿದೆ. ರಿಚಾ ಜಾರ್ಖಂಡ್ ರಾಜಧಾನಿ ರಾಂಚಿ ಮೂಲದವರು. 11ನೇ ತರಗತಿ ಓದುತ್ತಿದ್ದ ರಿಚಾ ಇದೇ ವರ್ಷದ ಕೋಚಿಂಗ್ಗೆಂದು ಕೋಟಾಗೆ ಬಂದಿದ್ದರು'' ಎಂದು ವಿಜ್ಞಾನ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಅಮರ್ ಚಂದ್ ವಿವರಿಸಿದರು.
ಮುಂದುವರೆದು ಮಾತನಾಡಿದ ಎಎಸ್ಐ, "ರಿಚಾ ಆತ್ಮಹತ್ಯೆಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಯಾವುದೇ ಡೆತ್ನೋಟ್ ಕೂಡ ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂಬಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ'' ಎಂದು ಮಾಹಿತಿ ನೀಡಿದರು.
ಆಕಾಂಕ್ಷಿಗಳ ಸಾವಿನ ಸಂಖ್ಯೆ 23ಕ್ಕೆ ಏರಿಕೆ:ರಿಚಾ ಸಿನ್ಹಾ ಸಾವಿನೊಂದಿಗೆ ಕೋಟಾದಲ್ಲಿ ಈ ವರ್ಷದಲ್ಲಿ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡು ಐಐಟಿ ಹಾಗೂ ನೀಟ್ ಆಕಾಂಕ್ಷಿಗಳ ಸಂಖ್ಯೆ 23ಕ್ಕೆ ಹೆಚ್ಚಳವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪರೀಕ್ಷೆಗಳಿಗೆ ತಯಾರಿಗೆಂದು ಬಂದಿದ್ದ 15 ವಿದ್ಯಾರ್ಥಿಗಳು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ಹೋಲಿಸಿದರೆ ಈ ವರ್ಷ ಇದರ ಸಂಖ್ಯೆ ಅಧಿಕವಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲೇ ನಾಲ್ವರು ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದರು. ಆ.16ರಂದು ಬಿಹಾರದ ಗಯಾ ನಿವಾಸಿ, 18 ವರ್ಷದ ವಾಲ್ಮೀಕಿ ಪ್ರಸಾದ್ ಜಂಗಿದ್ ಎಂಬ ವಿದ್ಯಾರ್ಥಿನಿ ತನ್ನ ಬಾಡಿಗೆ ಕೊಠಡಿಯಲ್ಲಿ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ಅದೇ ತಿಂಗಳಲ್ಲಿ ಉತ್ತರ ಪ್ರದೇಶದ ಅಜಂಗಢ ನಿವಾಸಿ ಮನೀಶ್ ಪ್ರಜಾಪತಿ, ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಂಜೋತ್ ಛಾಬ್ರಾ ಮತ್ತು ಬಿಹಾರದ ಮೋತಿಹಾರಿ ನಿವಾಸಿ ಭಾರ್ಗವ್ ಮಿಶ್ರಾ ಎಂಬ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದ ಬಗ್ಗೆ ವರದಿಯಾಗಿತ್ತು.
ಇದನ್ನೂ ಓದಿ:Student suicide: ಕೋಟಾದಲ್ಲಿ ಮತ್ತೊಬ್ಬ ಐಐಟಿ ಆಕಾಂಕ್ಷಿ ಆತ್ಮಹತ್ಯೆ: 8 ತಿಂಗಳಲ್ಲಿ 22ನೇ ಸಾವು ಪ್ರಕರಣ!