ಜಗದ್ವಿಖ್ಯಾತ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಒಲಿಪಿಂಕ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದಾರೆ. ಅವರ ಸಾಧನೆಯ ಹಿಂದಿನ ಶಕ್ತಿ ಎನಿಸಿರುವ ಕನ್ನಡಿಗ ಕಾಶಿನಾಥ್ ನಾಯ್ಕ ಅವರಿಗೆ ಕರ್ನಾಟಕ ಸರ್ಕಾರ ₹10 ಲಕ್ಷ ಪ್ರೋತ್ಸಾಹಧನ ಘೋಷಿಸಿದೆ. ಈ ಬಗ್ಗೆ ಕಾಶಿನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ನೀರಜ್ ಒಲಿಂಪಿಕ್ನಲ್ಲಿ ಬಂಗಾರದ ಪದಕ ಗೆದ್ದ ಬಳಿಕ ಅವರ ತರಬೇತುದಾರರಾಗಿದ್ದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾಶಿನಾಥ್ ಅವರು ಭಾರೀ ಸುದ್ದಿಯಲ್ಲಿದ್ದಾರೆ. ಇನ್ನು, ತಮ್ಮನ್ನು ಗುರುಸಿಸಿ ರಾಜ್ಯ ಸರ್ಕಾರ ಪ್ರೋತ್ಸಾಹಧನ ಘೋಷಣೆ ಮಾಡಿದ್ದಕ್ಕಾಗಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕ್ರೀಡಾ ಸಚಿವರಿಗೂ ಕಾಶಿನಾಥ್ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾಶಿನಾಥ್ ಅವರು, ನೀರಜ್ ಚೋಪ್ರಾ ಗೋಲ್ಡ್ ಮೆಡಲ್ ಪಡೆದ ಬಳಿಕ ನನಗೆ ಸಾಕಷ್ಟು ಮೆಸೇಜ್ಗಳು, ಕರೆಗಳು ಬರುತ್ತಿವೆ. ನೀರಜ್ಗೆ ನಾನು 2013ರಿಂದ 2017ರವರೆಗೆ ಜಾವೆಲಿನ್ ಥ್ರೋ ಕೋಚ್ ಆಗಿದ್ದೆ. ನೀರಜ್ ಅಷ್ಟೇ ಅಲ್ಲ, ಅನುರಾಣಿ, ಶಿವಪಾಲ್ ಸಿಂಗ್, ದೇವೇಂದ್ರ ಸಿಂಗ್ ಸೇರಿದಂತೆ ನಾನು ತರಬೇತಿ ನೀಡಿದ್ದ ಸಾಕಷ್ಟು ಮಂದಿ ಜೂನಿಯರ್ ಮೆಡಲಿಸ್ಟ್ ಆಗಿದ್ದಾರೆ ಎಂದ್ರು.
ಆದರೆ, ಇವರೆಲ್ಲರ ಸಾಧನೆಯ ಹಿಂದೆ ಒಬ್ಬ ಗುರುವಿನ ಶ್ರದ್ಧೆ, ಪರಿಶ್ರಮ ಎಷ್ಟಿರುತ್ತದೆ ಎಂಬುದು ಯಾರಿಗೂ ಕಾಣಿಸುತ್ತಿಲ್ಲ ಎಂದು ನಾನು ಭಾವಿಸಿದ್ದೆ. 2010ರಲ್ಲಿ ನಾನು ಕಾಮನ್ವೆಲ್ತ್ನಲ್ಲಿ ಪದಕ ಗೆದ್ದಾಗ, ಕರ್ನಾಟಕ ಸರ್ಕಾರ ಹಾಗೇ ಕೇಂದ್ರ ಸರ್ಕಾರ ಕರೆದು ಸನ್ಮಾನ ಮಾಡಿದ್ದವು. ಆದ್ರೆ, ನಾನು ಕೋಚ್ ಆದ ಮೇಲೆ ನನಗೆ ಯಾವುದೇ ಸನ್ಮಾನ ದೊರೆತಿಲ್ಲ. ಹೀಗಾಗಿ, ಸಾಧಕರಿಗಷ್ಟೇ ಸನ್ಮಾನವೇ?ಗುರುವಿನ ಪರಿಶ್ರಮ ಯಾರೂ ಗುರ್ತಿಸುವುದಿಲ್ಲವೇ ಎನಿಸಿತ್ತು.