ನೀಮಚ್(ಮಧ್ಯಪ್ರದೇಶ):ಕಳೆದ ವಾರ ಮಧ್ಯಪ್ರದೇಶದ ನೀಮಚ್‌ನಲ್ಲಿ ಮಾನಸಿಕ ಅಸ್ವಸ್ಥ ವೃದ್ಧನನ್ನು ಕೊಂದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ ಸಿಬಿಐ ಅಧಿಕಾರಿಯಂತೆ ನಟಿಸಿ ಬಾಲಕನಿಗೆ ವಿಡಿಯೋ ರೆಕಾರ್ಡ್ ಮಾಡುವಂತೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪ್ರಸಾರ ಮಾಡಿದ ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ಮತ್ತು ಇತರ ಐವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅವರೆಲ್ಲರನ್ನೂ ಬಂಧಿಸಿದ್ದಾರೆ.
ಏನಿದು ಪ್ರಕರಣ:ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರತ್ಲಾಮ್ ಜಿಲ್ಲೆಯ ಸರ್ಸಿ ಗ್ರಾಮದ ನಿವಾಸಿ, ಮಾನಸಿಕ ಅಸ್ವಸ್ಥ ಭನ್ವರ್‌ಲಾಲ್ ಜೈನ್ (65) ಮೇ 16ರಂದು ನಾಪತ್ತೆಯಾಗಿದ್ದರು. ಅವರು ಮೇ 19 ರಂದು ನೀಮಚ್ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರೋಪಿ ದಿನೇಶ್ ಕುಶ್ವಾಹ (38) ಜೈನ್‌ಗೆ ಪದೇ ಪದೆ ಕಪಾಳಮೋಕ್ಷ ಮಾಡುತ್ತಿದ್ದ ವಿಡಿಯೋ ಕೂಡಾ ವೈರಲ್ ಆಗಿತ್ತು. ಇದು ವೃದ್ಧನ ಕುಟುಂಬಸ್ಥರಿಗೆ ಗೊತ್ತಾಗಿ ವೃದ್ಧನನ್ನು ಗುರುತಿಸಿದ್ದರು.
ಆಕ್ಷೇಪಾರ್ಹ ವಿಡಿಯೊ ವೈರಲ್ : ಈ ವೈರಲ್ ವಿಡಿಯೋದಲ್ಲಿರುವ ವೃದ್ಧನನ್ನು ಗುರುತಿಸಿದ್ದ ಕುಟುಂಬ, ಅದೇ ವಿಡಿಯೋದೊಂದಿಗೆ ಪೊಲೀಸರನ್ನು ಸಂಪರ್ಕಿಸಿ, ಆರೋಪಿ ಕುಶ್ವಾಹ ವಿರುದ್ಧ ದೂರು ದಾಖಲಿಸಿದ್ದರು. ವೃದ್ಧನ ಕುಟುಂಬಸ್ಥರಿಂದ ದೂರು ಸ್ವೀಕರಿಸಿದ ಪೊಲೀಸರು ಮೇ 20 ರಂದು ಕುಶ್ವಾಹನನ್ನು ಬಂಧಿಸಿದ್ದರು.
ಪೊಲೀಸರು ಈ ಬಗ್ಗೆ ಹೇಳಿದ್ದೇನು?: ಪ್ರಕರಣದ ಬಗ್ಗೆ ಮಾತನಾಡಿರುವ ಮಾನಸ ಪೊಲೀಸ್ ಠಾಣೆಯ ಪ್ರಭಾರಿ ಕೆ.ಎಲ್.ಡಂಗಿ, ಕುಶ್ವಾಹ ಸಿಬಿಐ ಅಧಿಕಾರಿಯಂತೆ ನಟಿಸುತ್ತಿದ್ದ. ಅಷ್ಟೇ ಅಲ್ಲ ಅಪ್ರಾಪ್ತನಿಗೆ ಬೆದರಿಕೆ ಹಾಕಿದ್ದ. ಅದೂ ಅಲ್ಲದೇ ವೃದ್ಧನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಮಾಡಲು ಒತ್ತಾಯಿಸಿದ್ದ ಎಂದು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ವೈರಲ್ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿ ವಾಟ್ಸ್ಆ್ಯಪ್ ಅಡ್ಮಿನ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಪ್ರಶ್ನಿಸಿದ ಪ್ರತಿಪಕ್ಷ: ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮಾತನಾಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ್ದಾರೆ. ಪ್ರಕರಣದಲ್ಲಿ ಆರೋಪಿ ಆಡಳಿತಾರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದೂ ಅವರು ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕ ಕಮಲ್ನಾಥ್ ಆರೋಪವನ್ನು ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ತಳ್ಳಿ ಹಾಕಿದ್ದಾರೆ. ಆರೋಪಿ ಕೇವಲ ಆರೋಪಿಯಷ್ಟೇ, ಪಕ್ಷ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ:ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಯಾರನ್ನೂ ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದೂ ರಜನೀಶ್ ಅಗರ್ವಾಲ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ:ಗೆಳತಿಗಾಗಿ ಸ್ನೇಹಿತನ ಕೊಂದು ಮನೆಯಲ್ಲಿ ಹೂತಿಟ್ಟ..ಕೊನೆಗೂ ಬಯಲಾಯ್ತು 7 ತಿಂಗಳ ರಹಸ್ಯ!