ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನರು ಗೃಹ ಸಾಲ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ, ಅದನ್ನು ಪಡೆಯುವ ಪ್ರಕ್ರಿಯೆಯಲ್ಲಿ ಮಾತ್ರ ಅವರು ಸಾಕಷ್ಟು ಅಡೆತಡೆ ಎದುರಿಸುತ್ತಾರೆ. ಇಂಥ ಸಂದರ್ಭದಲ್ಲೇ ಕ್ರೆಡಿಟ್ ಸ್ಕೋರ್ ವಿಚಾರ ಮುಖ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಒಟ್ಟಾರೆ ಆರ್ಥಿಕ ಶಿಸ್ತಿನ ಸೂಚ್ಯಂಕವಾಗಿದೆ. ನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಕನಸಿನ ಮನೆಗಾಗಿ ಸಾಲ ಪಡೆಯುವ ಹೋರಾಟದಲ್ಲಿ ಅರ್ಧದಷ್ಟು ಗೆದ್ದಂತೆ.
300 ರಿಂದ 900 ರವರೆಗೆ ಅಳೆಯಲಾಗುವ ಸ್ಕೋರ್ ಕಾರ್ಡ್ ಸಾಲ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಈ ಕ್ರೆಡಿಟ್ ಸ್ಕೋರ್ ಎಂಬುದು ಮೂಲದಲ್ಲಿ ನೀವು ಸಾಲ ಪಡೆದು ಅದನ್ನು ಎಷ್ಟು ಸಕಾಲದಲ್ಲಿ ಪಾವತಿಸಿರುವಿರಿ ಎಂಬುದರ ದಾಖಲೆಯಾಗಿದೆ. ಹೀಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ನೋಡಿದಾಕ್ಷಣ ನಿಮ್ಮ ಬಗ್ಗೆ ಸುಲಭವಾಗಿ ಒಂದು ಕಲ್ಪನೆಯನ್ನು ಪಡೆಯುತ್ತವೆ. ಹೀಗಾಗಿ ಸಾಲ ಪಡೆಯುವ ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿ ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಸಕಾಲಿಕ ಮರುಪಾವತಿ ಇತಿಹಾಸವೇ ಮುಖ್ಯ:ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಧರಿಸುವಲ್ಲಿ ನಿಮ್ಮ ಸಕಾಲಿಕ ಮರುಪಾವತಿಯ ಇತಿಹಾಸವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೊನೆಯ ದಿನಾಂಕದ ಮೊದಲೇ ಸಾಲದ ಕಂತಿನ ಪಾವತಿ ಮಾಡಬೇಕು. ಕಂತು ಪಾವತಿಯಲ್ಲಿ ಯಾವುದೇ ವಿಳಂಬ ಮಾಡಿದರೆ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನು ಪರಿಶೀಲಿಸಿ ಮತ್ತು ನೀಡಲಾದ ಲಿಮಿಟ್ನ ಶೇ 30ಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಒಮ್ಮೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಅತಿಯಾಗಿ ಖರ್ಚು ಮಾಡಿದರೆ, ನೀವು ಸಾಲಗಳ ಮೇಲೆ ಅವಲಂಬಿತರಾಗಿದ್ದೀರಿ ಎಂದು ಹಣಕಾಸು ಸಂಸ್ಥೆಗಳು ತೀರ್ಮಾನಿಸುತ್ತವೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಬೇಕು. ಸಮಯೋಚಿತ ಮರುಪಾವತಿಯು ನಿಮ್ಮ ಹಣಕಾಸಿನ ಶಿಸ್ತಿನ ಬಗ್ಗೆ ತಿಳಿಸುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತದೆ.
ಶ್ಯೂರಿಟಿ ಇಲ್ಲದ ಸಾಲ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತೆ:ಶ್ಯೂರಿಟಿ ಇಲ್ಲದ ಸಾಲಗಳನ್ನು ಮಾತ್ರ ತೆಗೆದುಕೊಳ್ಳುವುದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಒಟ್ಟಾರೆ ಸ್ಕೋರ್ ಅನ್ನು ಸುಧಾರಿಸಲು ಕೆಲವು ಜಾಮೀನು ಆಧಾರಿತ ಸಾಲಗಳನ್ನು ಸಹ ತೆಗೆದುಕೊಳ್ಳಬೇಕು. ಜಾಮೀನು ಅಥವಾ ಶ್ಯೂರಿಟಿ ಒದಗಿಸುವ ನಿಮ್ಮ ಸಾಮರ್ಥ್ಯವು ನಿಮ್ಮ ಸಾಲ ಮರುಪಾವತಿ ಸಾಮರ್ಥ್ಯದ ಬಗ್ಗೆ ಹಣಕಾಸು ಸಂಸ್ಥೆಗಳಲ್ಲಿ ವಿಶ್ವಾಸ ಸೃಷ್ಟಿಸುತ್ತದೆ. ಶ್ಯೂರಿಟಿಯೊಂದಿಗೆ ಮತ್ತು ಶ್ಯೂರಿಟಿ ಇಲ್ಲದ ಎರಡೂ ಬಗೆಯ ಸಾಲಗಳ ಮಿಶ್ರಣ ಕ್ರೆಡಿಟ್ ಸ್ಕೋರ್ ಮೇಲಿನ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುತ್ತದೆ.