ಶಿಮ್ಲಾ(ಹಿಮಾಚಲ ಪ್ರದೇಶ): ರಾಜ್ಯದ ಮಂಡಿ ಜಿಲ್ಲೆಯ ಶೆಹ್ನು ಗೌನಿ ಗ್ರಾಮ ಮತ್ತು ಖೋಲನಾಲಾ ಪಂಚಾಯತ್‌ನಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಅವಘಡದಲ್ಲಿ ಸಿಲುಕಿದ್ದ 51 ಜನರನ್ನು ಎನ್ಡಿಆರ್ಎಫ್ನ 14ನೇ ಬೆಟಾಲಿಯನ್ ರಕ್ಷಿಸಿದೆ. ಮಂಡಿ ಜಿಲ್ಲೆಯ ಹನೋಗಿ ಮಾತಾ ದೇವಸ್ಥಾನದ ಸಮೀಪವಿರುವ ಗ್ರಾಮ ಪಂಚಾಯತ್ ಖೋಲನಾಲ್ನಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 300 ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮಾಹಿತಿ ತಿಳಿದ ಎನ್‌ಡಿಆರ್‌ಎಫ್ ತಂಡ ತಕ್ಷಣ ಸೆರಾಜ್ ಭವನ ಕುಲುವಿನಿಂದ ಘಟನಾ ಸ್ಥಳಕ್ಕೆ ತೆರಳಿತು. ಭೂಕುಸಿತದಿಂದ ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಎನ್‌ಡಿಆರ್‌ಎಫ್ ತಂಡ ಹನೋಗಿಯಿಂದ ಮಂಡಿ ಜಿಲ್ಲೆಯ ಖೋಲನಾಲಾ ಗ್ರಾಮದ ಘಟನಾ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳಿತು. ಸುಮಾರು 8 ಕಿ.ಮೀ ದೂರವನ್ನು ಕ್ರಮಿಸಿ ಶೆಹ್ನು ಗೌನಿ ಗ್ರಾಮವನ್ನು ತಲುಪಿತು. 16 ಪುರುಷರು, 20 ಮಹಿಳೆಯರು ಮತ್ತು 15 ಮಕ್ಕಳು ಅವಘಡದಲ್ಲಿ ಸಿಲುಕಿದ್ದು, ಅವರನ್ನು ಎನ್‌ಡಿಆರ್‌ಎಫ್ ತಂಡ ಹನೋಗಿ ಗ್ರಾಮಕ್ಕೆ ಸ್ಥಳಾಂತರಿಸಿದೆ.
ಬಾಲಿ ಚೌಕಿಯ ಎಸ್ಡಿಎಂ, ತಹಸೀಲ್ದಾರ್ ಮತ್ತು ಬಿಡಿಒ ಅವರೊಂದಿಗಿನ ಉಳಿದ ತಂಡ ಕಾಲ್ನಡಿಗೆಯಲ್ಲಿ ಮಂಡಿ ಜಿಲ್ಲೆಯ ಖೋಲನಾಲಾ ಗ್ರಾಮದ ಘಟನಾ ಸ್ಥಳಕ್ಕೆ ತೆರಳಿತು. ಸಿಕ್ಕಿಬಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಗುರುವಾರ ಮುಂಜಾನೆ, ಮಂಡಿ ಜಿಲ್ಲಾಡಳಿತ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ಜಿಲ್ಲೆಯ ದೂರದ ಪ್ರದೇಶಕ್ಕೆ ಆಹಾರ ಪದಾರ್ಥಗಳು ಮತ್ತು ಔಷಧಗಳನ್ನು ರವಾನೆ ಮಾಡಿದೆ.
ಮೊದಲ ವಿಮಾನದಲ್ಲಿ ತಲಾ 15 ಕೆ.ಜಿ ತೂಕದ 55 ಕಿಟ್‌ಗಳು ಮತ್ತು ಮೂರು ಬಾಕ್ಸ್ ಔಷಧಗಳನ್ನು ಕಳುಹಿಸಲಾಗಿತ್ತು. ಆಹಾರ ಪದಾರ್ಥಗಳ ಪ್ರತಿಯೊಂದು ಕಿಟ್‌ನಲ್ಲಿ ಹಿಟ್ಟು, ಅಕ್ಕಿ, ಎರಡು ರೀತಿಯ ಬೇಳೆ ಕಾಳುಗಳು, ಎಣ್ಣೆ ಮತ್ತು ಮಸಾಲೆಗಳು ಇವೆ. ಮಂಡಿಯ ಕಂಗ್ನಿಧರ್‌ನಿಂದ ಹೆಲಿಕಾಪ್ಟರ್ ವಸ್ತುಗಳೊಂದಿಗೆ ಹೊರಟಿತು. ಕರ್ತಾಚ್ ಗ್ರಾಮಕ್ಕೂ ಪರಿಹಾರ ಸಾಮಗ್ರಿ ಕಳುಹಿಸಲಾಗಿದೆ. ರಾಜ್ಯದ ಇತರ ಎರಡು ಸ್ಥಳಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಮತ್ತೊಂದು ವಿಮಾನವನ್ನು ನಿಗದಿಪಡಿಸಲಾಗಿದೆ.
ಯೆಲ್ಲೋ ಅಲರ್ಟ್ ಘೋಷಣೆ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಮತ್ತು ಶುಕ್ರವಾರ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಜತೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. "ಸೋಲನ್, ಶಿಮ್ಲಾ, ಸಿರ್ಮೌರ್, ಮಂಡಿ, ಕುಲು, ಉನಾ, ಬಿಲಾಸ್ಪುರ್ ಮತ್ತು ಕಂಗ್ರಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಾವು ಆಗಸ್ಟ್ 24 ಮತ್ತು 25ರಂದು ಯೆಲ್ಲೋ ಅಲರ್ಟ್ ಘೋಷಿಸಿದ್ಧೇವೆ" ಎಂದು ಐಎಂಡಿ ವಿಜ್ಞಾನಿ ಸಂದೀಪ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ.