ಕರ್ನಾಟಕ

karnataka

2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಶೇ 50ಕ್ಕಿಂತಲೂ ಹೆಚ್ಚು ಮತ ಪಡೆಯಲಿದೆ: ಮೋದಿ

By

Published : Jul 19, 2023, 8:15 AM IST

Updated : Jul 19, 2023, 8:26 AM IST

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

modi
ಮೋದಿ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಪಡೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳವಾರ ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸೇರಿ ತಮ್ಮ ಎರಡನೇ ಏಕತಾ ಸಭೆಯನ್ನು ನಡೆಸಿದ ಕೆಲವೇ ಗಂಟೆಗಳ ಬಳಿಕ ಸಂಜೆ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎನ್‌ಡಿಎ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, "ನಮ್ಮ ಎಲ್ಲ ಮೈತ್ರಿ ಪಾಲುದಾರರು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಶೇ 38 ರಷ್ಟು (ಒಟ್ಟು ಮತಗಳಲ್ಲಿ) ಮತಗಳನ್ನು ಪಡೆದಿದೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ನಾವು ಮಾಡಿದ ಕೆಲಸವನ್ನು ಗುರುತಿಸಿ, ಅವರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ, 2019ರ ಚುನಾವಣೆಯಲ್ಲಿ ಒಟ್ಟು ಶೇ 45ರಷ್ಟು ಮತಗಳನ್ನು ನಮಗೆ ನೀಡಿದರು. ಮುಂಬರುವ ಚುನಾವಣೆಯಲ್ಲಿ ಸಹ ನಾವು ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ" ಎಂದರು.

ಎನ್‌ಡಿಎ ಎಂದರೆ..: ಎನ್​ಡಿಎ ಎಂದರೇನು ಎಂಬ ಕುರಿತು ಸಭೆಯಲ್ಲಿ ವ್ಯಾಖ್ಯಾನಿಸಿದ ಪ್ರಧಾನಿ ಮೋದಿ, ಎನ್ ಅಂದರೆ - ನ್ಯೂ ಇಂಡಿಯಾ, ಡಿ - ಡೆವಲಪ್​ಮೆಂಟ್ ಹಾಗೂ ಎ - ಆಸ್ಪಿರೇಷನ್ ಎಂದು ಬಣ್ಣಿಸಿದರು. ನಮ್ಮ ದೇಶದ ಜನರ ಅಭಿವೃದ್ಧಿಯೇ ಎನ್​ಡಿಎ ಮೈತ್ರಿಕೂಟದ ವಿಚಾರಧಾರೆ. ನಾವು ಬಡತನ ನಿರ್ಮೂಲನೆ ಮಾಡುತ್ತೇವೆ. ದೇಶದ ಬಡವರು, ಯುವಕರು, ದಲಿತರು, ಆದಿವಾಸಿಗಳು ಮಹಿಳೆಯರು ಎನ್​ಡಿಎ ಒಕ್ಕೂಟದ ಜೊತೆ ಇದ್ದಾರೆ ಎಂದು ತಿಳಿಸಿದರು.

ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ: ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, "ನಾವು ವಿರೋಧ ಪಕ್ಷದಲ್ಲಿದ್ದಾಗಲೂ ಸಕಾರಾತ್ಮಕ ರಾಜಕೀಯ ಮಾಡಿದ್ದೇವೆ. ಎಂದಿಗೂ ಸರ್ಕಾರವನ್ನು ವಿರೋಧಿಸಲು ವಿದೇಶಿ ಸಹಾಯ ಕೇಳಲಿಲ್ಲ. ಹಿಂದಿನ ಸರ್ಕಾರಗಳ ಹಗರಣಗಳನ್ನು ಬಯಲಿಗೆಳೆದಿದ್ದೇವೆ. ಆದರೆ ಎಂದಿಗೂ ಜನಾದೇಶವನ್ನು ಪ್ರಶ್ನಿಸಲಿಲ್ಲ ಅಥವಾ ಅವಮಾನಿಸಲಿಲ್ಲ. ವಿರೋಧ ಪಕ್ಷಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗಬಾರದು. ದೇಶದಲ್ಲಿ ಹಿಂದಿನಿಂದಲೂ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸಂಪ್ರದಾಯವಿದೆ. ಅಧಿಕಾರ ಬಲದಿಂದ ಮೈತ್ರಿಯಾದಾಗ, ಭ್ರಷ್ಟಾಚಾರದ ಉದ್ದೇಶದಿಂದ ಮೈತ್ರಿ ಮಾಡಿಕೊಂಡಾಗ, ಕೌಟುಂಬಿಕ ನೀತಿಯ ಆಧಾರದ ಮೇಲೆ ಮೈತ್ರಿ, ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಮಾಡಿಕೊಂಡರೆ ಅದು ದೇಶಕ್ಕೆ ಹಾನಿ. ನಕಾರಾತ್ಮಕತೆಯೊಂದಿಗೆ ರಚಿಸಲಾದ ಯಾವುದೇ ಮೈತ್ರಿ ಎಂದಿಗೂ ಯಶಸ್ವಿಯಾಗುವುದಿಲ್ಲ. 90ರ ದಶಕದಲ್ಲಿ ದೇಶದಲ್ಲಿ ಅಸ್ಥಿರತೆ ತರಲು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಮೂಲಕ ದೇಶವನ್ನೇ ಹಾಳು ಮಾಡಿತ್ತು" ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ :NDAಗೆ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ : ನಮ್ಮಲ್ಲಿ ದೊಡ್ಡ, ಚಿಕ್ಕ ಪಕ್ಷ ಎಂಬ ಭೇದವಿಲ್ಲ- ಮೋದಿ

"ರಾಜಕೀಯದಲ್ಲಿ ಸ್ಪರ್ಧಾತ್ಮಕತೆ ಇರಬೇಕು, ದ್ವೇಷವಲ್ಲ. ನಾವು ಭಾರತವನ್ನು ಎಲ್ಲ ರಾಜಕೀಯ ಹಿತಾಸಕ್ತಿಗಳಿಗಿಂತಲೂ ಒಂದು ಕೈ ಹೆಚ್ಚಾಗಿಯೇ ಮೇಲೆ ಇರಿಸಿದ್ದೇವೆ. ಎನ್‌ಡಿಎ ಸರ್ಕಾರವೇ ಮಾಜಿ ರಾಷ್ಟ್ರಪತಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಶರದ್ ಪವಾರ್, ಮುಲಾಯಂ ಸಿಂಗ್ ಯಾದವ್, ಗುಲಾಂ ನಬಿ ಆಜಾದ್, ಮುಜಾಫರ್ ಬೇಗ್ ಸೇರಿದಂತೆ ಇಂದು ನಮ್ಮೊಂದಿಗೆ ಇಲ್ಲದ ಅನೇಕ ನಾಯಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.

Last Updated : Jul 19, 2023, 8:26 AM IST

ABOUT THE AUTHOR

...view details