ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಆಗಿರುವ ದ್ರೌಪದಿ ಮುರ್ಮು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಪರಾಷ್ಟ್ರಪತಿ ಮತ್ತು ಪ್ರಧಾನಿ ಹಾಗೂ ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಿದರು.
ಜುಲೈ 18ರಂದು ನಡೆಯುಲಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದ ಮೇಲೆ ಮೊದಲ ಬಾರಿಗೆ ಇಂದು ದ್ರೌಪದಿ ಮುರ್ಮು ದೆಹಲಿ ಪ್ರವಾಸ ಕೈಗೊಂಡರು. ಒಡಿಶಾದ ಭುವನೇಶ್ವರದಿಂದ ದೆಹಲಿಗೆ ಆಗಮಿಸಿರುವ ಅವರು, ನಾಳೆ (ಜೂ.24) ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭೇಟಿಯಾದ ದ್ರೌಪದಿ ಮುರ್ಮು ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಎಲ್ಲ ನಾಯಕರು ದ್ರೌಪದಿ ಮುರ್ಮು ಅವರಿಗೆ ಶುಭ ಕೋರಿದರು.
ಅಲ್ಲದೇ, ದ್ರೌಪದಿ ಮುರ್ಮು ಭೇಟಿ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, 'ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ದೇಶಾದ್ಯಂತ ಸಮಾಜದ ಎಲ್ಲ ವರ್ಗಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಳಮಟ್ಟದ ಸಮಸ್ಯೆಗಳ ಬಗ್ಗೆ ಅವರ ತಿಳುವಳಿಕೆ ಹಾಗೂ ದೃಷ್ಟಿಕೋನವು ಭಾರತದ ಅಭಿವೃದ್ಧಿಯಲ್ಲಿ ಮಹೋನ್ನತ ಪಾತ್ರ ವಹಿಸಲಿದೆ' ಎಂದು ಹೇಳಿದ್ದಾರೆ.
ಬಿಜೆಡಿ ಬೆಂಬಲ:ಒಡಿಶಾದವರಾದ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಆಡಳಿತಾರೂಢ ಬಿಜೆಡಿ ಪಕ್ಷ ಬೆಂಬಲ ಘೋಷಿಸಿದೆ. ಅಲ್ಲದೇ, ಪಕ್ಷದ ಮುಖ್ಯಸ್ಥ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ನಿರ್ದೇಶನದ ಮೇರೆಗೆ ಇಂದು ಒಡಿಶಾದ ಸಚಿವರಾದ ಜಗನ್ನಾಥ್ ಸರಕಾರ ಮತ್ತು ತುಕುನಿ ಸಾಹು ದೆಹಲಿಯಲ್ಲಿ ದ್ರೌಪದಿ ಮುರ್ಮು ಅವರ ನಾಮಪತ್ರಕ್ಕೆ ಸಹಿ ಹಾಕಿದರು. ಎನ್‌ಡಿಎ ಅಭ್ಯರ್ಥಿ ಆಗಿ ಮುರ್ಮು ನಾಮಪತ್ರ ಸಲ್ಲಿಸುವ ಸಮಯದಲ್ಲೂ ಈ ಇಬ್ಬರು ಸಚಿವರು ಜೊತೆಗಿರಲಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆಗೋಸ್ಕರ ಮಹಾರಾಷ್ಟ್ರ ಸರ್ಕಾರದ ಅಸ್ಥಿರ ಯತ್ನ: ಖರ್ಗೆ