ಕರ್ನಾಟಕ

karnataka

By

Published : Jul 18, 2023, 5:22 PM IST

Updated : Jul 18, 2023, 5:41 PM IST

ETV Bharat / bharat

ದೆಹಲಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಆರಂಭ... ನಮ್ಮದು ದೀರ್ಘಾವಧಿ ಮೈತ್ರಿ ಎಂದ ಪ್ರಧಾನಿ ಮೋದಿ

ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಭೆ ಕರೆಯಲಾಗಿದ್ದು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಿದ್ದಾರೆ.

nda-meeting-bjp-eyes-grand-show-of-strength-of-its-alliance-38-parties-confirm-presence
ದೆಹಲಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಆರಂಭ... ನಮ್ಮದು ದೀರ್ಘಾವಧಿ ಮೈತ್ರಿ ಎಂದ ಪ್ರಧಾನಿ ಮೋದಿ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಸರಿ ಸುಮಾರು 10 ತಿಂಗಳು ಬಾಕಿಯಾಗಿದೆ. ಆದರೆ, ಈಗಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರಿನಲ್ಲಿ ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟವು ಎರಡು ದಿನಗಳ ಮಹತ್ವದ ಸಭೆ ನಡೆಸಿದೆ. ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಭೆ ಆರಂಭವಾಗಿದೆ.

ಕಾಂಗ್ರೆಸ್​ 26 ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ತನ್ನ ಬಲ ಪ್ರರ್ದಶನ ಮಾಡಿದೆ. ಬಿಜೆಪಿಯು ತನ್ನ ಮೈತ್ರಿಕೂಟದ ಶಕ್ತಿಯ ಮಹಾ ಪ್ರದರ್ಶನವನ್ನು ನಡೆಸುತ್ತಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಿರುವ ಈ ಸಭೆಯಲ್ಲಿ ಆಡಳಿತಾರೂಢ ಎನ್‌ಡಿಎಯ 38 ಪಕ್ಷಗಳು ಪಾಲ್ಗೊಂಡಿವೆ. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಮೊದಲ ಸಭೆ ಇದಾಗಿದೆ.

ಈ ಸಭೆಗೂ ಮುನ್ನ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, ಇಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತದಾದ್ಯಂತದ ನಮ್ಮ ಮೌಲ್ಯಯುತ ಎನ್‌ಡಿಎ ಪಾಲುದಾರರು ಭಾಗವಹಿಸುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ. ನಮ್ಮದು ದೀರ್ಘಾವಧಿಯ ಉಪಯುಕ್ತವಾದ ಮೈತ್ರಿಯಾಗಿದ್ದು, ಅದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಮತ್ತು ಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಬಿಜೆಪಿ ಎನ್‌ಡಿಎ ಮೈತ್ರಿಕೂಟವನ್ನು ವಿಸ್ತರಿಸಲು ಮುಂದಾಗಿದೆ. ಹೊಸದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ, ತೆಲುಗು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಬಿಜೆಪಿ ಮೈತ್ರಿಕೂಟದ ತೆಕ್ಕೆಗೆ ಜಾರಿದೆ. ಜೊತೆಗೆ ಮೈತ್ರಿಕೂಟದಿಂದ ದೂರ ಸರಿದ್ದ ಚಿರಾಗ್ ಪಾಸ್ವಾನ್, ಓಪಿ ರಾಜ್‌ಭರ್, ಉಪೇಂದ್ರ ಕುಶ್ವಾಹಾ ಮತ್ತು ಜಿತನ್ ರಾಮ್ ಮಾಂಝಿ ಸಹ ಬಿಜೆಪಿ ಮೈತ್ರಿಗೆ ಮರಳಿದ್ದಾರೆ.

ಈಗಾಗಲೇ ದಿ ಅಶೋಕ್ ಹೋಟೆಲ್​ನಲ್ಲಿ ಎನ್‌ಡಿಎ ಸಭೆಗೆ ನಾಯಕರು ಆಗಮಿಸಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಸಚಿವರಾದ ಅಮಿತ್​ ಶಾ, ಪ್ರಹ್ಲಾದ್ ಜೋಶಿ, ರಾಜನಾಥ್ ಸಿಂಗ್, ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ, ಎನ್‌ಸಿಪಿ ನಾಯಕ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್, ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೇರಿ ಹಲವರು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ:ವಿಪಕ್ಷಗಳ ಹೊಸ ಒಕ್ಕೂಟಕ್ಕೆ 'ಇಂಡಿಯಾ' ಎಂಬ ಹೆಸರು ಅಂತಿಮ, ಮುಂಬೈನಲ್ಲಿ ಮುಂದಿನ ಸಭೆ: ಖರ್ಗೆ

Last Updated : Jul 18, 2023, 5:41 PM IST

ABOUT THE AUTHOR

...view details