ನವದೆಹಲಿ : ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಸಭೆ ಇಂದು ಸಂಜೆ ನಡೆಯಲಿದ್ದು, ಸುಮಾರು 38 ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ವಿರೋಧ ಪಕ್ಷಗಳು ಸಭೆ ನಡೆಸುತ್ತಿವೆ. ತಮ್ಮ ಮೇಲಿನ 20 ಲಕ್ಷ ಕೋಟಿಗೂ ಅಧಿಕ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಹಾಕಲು ಅವರು ಒಗ್ಗಟ್ಟಾಗಿದ್ದಾರೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಜನರು ಮತ್ತೆ ಚುನಾಯಿಸುತ್ತಾರೆ. ಈ ಬಗ್ಗೆ ದೇಶ ನಿರ್ಧಾರ ಮಾಡಿದೆ ಎಂದರು.
ಅಮಿತ್ ಶಾ ಮತ್ತು ನಡ್ಡಾರನ್ನು ಭೇಟಿಯಾದ ಚಿರಾಗ್ ಪಾಸ್ವಾನ್ :ಲೋಕ ಜನಶಕ್ತಿ (ರಾಮ್ ವಿಲಾಸ್) ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರು ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಜೆ.ಪಿ ನಡ್ಡಾ ಹೇಳಿದರು. ಇದಕ್ಕೂ ಮೊದಲು ಪಾಸ್ವಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ನಡ್ಡಾ, ನಾನು ಚಿರಾಗ್ ಪಾಸ್ವಾನ್‌ಜೀ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದೆ. ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಸೇರಲು ಒಪ್ಪಿದ್ದಾರೆ. ಅವರಿಗೆ ಎನ್ಡಿಎ ಕುಟುಂಬಕ್ಕೆ ಸ್ವಾಗತ ಎಂದಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ತಮ್ಮ ಪಾಲಿನ ಸ್ಥಾನಗಳನ್ನು ಅಂತಿಮಗೊಳಿಸಲು ಬಿಜೆಪಿ ಜೊತೆ ಮಾತುಕತೆ ಪಾಸ್ವಾನ್ ನಡೆಸಿದರು.
ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿ, ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಅಮಿತ್ ಶಾ ಟ್ವೀಟ್ ಮಾಡಿ, ಬಿಹಾರದ ರಾಜಕೀಯದ ಬಗ್ಗೆ ನಾನು ಮತ್ತು ಪಾಸ್ವಾನ್ ಚರ್ಚೆ ನಡೆಸಿದೆವು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸಚಿವ ನಿತ್ಯಾನಂದ ರೈ ಎರಡು ಬಾರಿ ಪಾಸ್ವಾನ್ ಅವರನ್ನು ಭೇಟಿಯಾಗಿದ್ದರು.