ನವದೆಹಲಿ: ಎನ್‌ಸಿಇಆರ್‌ಟಿ ತನ್ನ 12ನೇ ತರಗತಿ ಪಠ್ಯಪುಸ್ತಗಳಲ್ಲಿನ ಕೆಲವೊಂದು ಪಠ್ಯಗಳನ್ನು ತೆಗೆದುಹಾಕಿದೆ. 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿನ Gandhiji's death had magical effect on communal situation in the country (ಗಾಂಧೀಜಿಯವರ ಮರಣವು ದೇಶದ ಕೋಮು ಪರಿಸ್ಥಿತಿಯ ಮೇಲೆ ಮಾಂತ್ರಿಕ ಪರಿಣಾಮ ಬೀರಿತು), Gandhi's pursuit of Hindu-Muslim unity provoked Hindu extremists (ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಪ್ರಯತ್ನಿಸಿದ್ದು ಹಿಂದೂವಾದಿಗಳನ್ನು ಕೆರಳಿಸಿತು) ಮತ್ತು Organizations like RSS were banned for some time (ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ಕೆಲಕಾಲ ನಿಷೇಧಿಸಲಾಗಿತ್ತು) ಇವೇ ಮುಂತಾದ ವಿಷಯಗಳನ್ನು ಹೊಸ ಶೈಕ್ಷಣಿಕ ಅವಧಿಯಿಂದ ಎನ್‌ಸಿಇಆರ್‌ಟಿ ತೆಗೆದುಹಾಕಿದೆ.
ಆದಾಗ್ಯೂ, ಈ ವರ್ಷ ಯಾವುದೇ ಪಠ್ಯಕ್ರಮವನ್ನು ಕಡಿತ ಮಾಡಲಾಗಿಲ್ಲ ಮತ್ತು ಕಳೆದ ವರ್ಷ ಜೂನ್‌ನಲ್ಲಿ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲಾಗಿದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಹೇಳಿಕೊಂಡಿದೆ. ಕಳೆದ ವರ್ಷ ತನ್ನ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಕಾರ್ಯದ ಭಾಗವಾಗಿ ಎನ್‌ಸಿಇಆರ್‌ಟಿ, ಗುಜರಾತ್ ಗಲಭೆಗಳು, ಮೊಘಲ್ ನ್ಯಾಯಾಲಯಗಳು, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲೀಯ ಚಳವಳಿಯ ಪಾಠಗಳನ್ನು ಒಳಗೊಂಡಂತೆ ಕೆಲವು ಭಾಗಗಳನ್ನು ಕೈಬಿಟ್ಟಿತು. ಇದರಲ್ಲಿ ಕೆಲ ವಿಷಯಗಳು ಪುನರಾವರ್ತನೆಯಾಗಿರುವುದರಿಂದ ಹಾಗೂ ಅಪ್ರಸ್ತುತವಾಗಿರುವುದರಿಂದ ಅವುಗಳನ್ನು ತೆಗೆದು ಹಾಕಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿತ್ತು.
ಕಳೆದ ವರ್ಷವೇ ತರ್ಕಬದ್ಧಗೊಳಿಸುವ ಸಂಪೂರ್ಣ ಕೆಲಸ ಮುಗಿಸಲಾಗಿದೆ. ಈ ವರ್ಷ ಹೊಸದೇನನ್ನೂ ಮಾಡಿಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಹೇಳಿದ್ದಾರೆ. ಆದರೆ ಪಠ್ಯವನ್ನು ತರ್ಕಬದ್ಧಗೊಳಿಸುವ ಟಿಪ್ಪಣಿಯಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಆದಾಗ್ಯೂ ತರ್ಕಬದ್ಧಗೊಳಿಸುವ ಸಮಯದಲ್ಲಿ ಯಾವುದೇ ಸೂಚನೆ ನೀಡದೆ ಪಠ್ಯಕ್ರಮದ ಕೆಲ ಭಾಗಗಳು ಕಾಣೆಯಾಗಿರುವ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.