ನವದೆಹಲಿ: 2022ರಲ್ಲಿ ದೇಶದಲ್ಲಿ ಅಪರಾಧ ಚಟುವಟಿಕೆಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿ ಬಹಿರಂಗ ಪಡಿಸಿದೆ. ಈ ವರದಿಯ ಮಾಹಿತಿ ಅನುಸಾರ ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಸಾಕಷ್ಟು ಏರಿಕೆ ಕಂಡಿವೆ. ಇಲ್ಲಿ 14,247 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದ್ದು, ಅಪರಾಧ ಪ್ರಮಾಣ ದರ 144.4 ಆಗಿದೆ. ಇದು ರಾಷ್ಟ್ರೀಯ ಸರಾಸರಿ 66.4 ಅನ್ನು ಮೀರಿಸಿದೆ.
ಕಳೆದ ವರ್ಷ ಅಂದರೆ 2021ಕ್ಕೆ ಹೋಲಿಕೆ ಮಾಡಿದಾಗ ಮಹಿಳೆಯರ ವಿರುದ್ಧ ದಾಖಲಾಗಿರುವ ಅಪರಾಧಗಳು ಆತಂಕಕಾರಿ ವಿಷಯವಾಗಿದೆ. 2021ರಲ್ಲಿ 10,093 ಪ್ರಕರಣಗಳು ದಾಖಲಾದರೆ, 2022ರಲ್ಲಿ ದೆಹಲಿಯಲ್ಲಿ 14,277 ಎಫ್ಐಆರ್ ದಾಖಲಾಗಿವೆ.
ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳ ಪ್ರಕರಣಗಳು ಹೆಚ್ಚಾಗಿರುವುದನ್ನು ಎನ್ಸಿಆರ್ಬಿ ದತ್ತಾಂಶ ತಿಳಿಸಿದೆ. ದೆಹಲಿಯಲ್ಲಿ ಸೈಬರ್ಕ್ರೈಂ ಪ್ರಕರಣಗಳಲ್ಲೂ ಕೂಡ ಏರಿಕೆ ಕಂಡಿದೆ. 2021ರಲ್ಲಿ ಸೈಬರ್ ಅಪರಾಧ ಸಂಬಂಧ 345 ಪ್ರಕರಣ ದಾಖಲಾದರೆ, 2022ರಲ್ಲಿ 685 ಪ್ರಕರಣ ದಾಖಲಾಗಿದೆ. ಈ ಮೂಲಕ ಡಿಜಿಟಲ್ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂಬುದನ್ನು ಬಹಿರಂಗ ಪಡಿಸಿದೆ.
ಅಷ್ಟೇ ಅಲ್ಲದೇ, ರಾಷ್ಟ್ರ ರಾಜಧಾನಿಯಲ್ಲಿ 509 ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಕೊಲೆಗಳ ಹಿಂದಿನ ಉದ್ದೇಶ ಪ್ರೇಮ ವಿಚಾರ, ವೈಯಕ್ತಿಕ ಕಲಹ, ಡಕಾಯಿತಿ ಎಂದು ಎನ್ಸಿಆರ್ಬಿ ದತ್ತಾಂಶ ತಿಳಿಸಿದೆ.
ದೆಹಲಿಯಲ್ಲಿ 2022ರಲ್ಲಿ 16 ಜನರು ಪ್ರೀತಿ ವಿಚಾರವಾಗಿ ಜೀವ ಕಳೆದುಕೊಂಡರೆ, ಅನೈತಿಕ ಸಂಬಂಧದಿದ 13 ಮಂದಿ, ಕಳ್ಳತನದಿಂದ 10 ಮಂದಿ ಕೊಲೆಗೀಡಾಗಿದ್ದಾರೆ.
ಮಹಿಳೆಯರ ಮೇಲಿನ ಅಪರಾಧ ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. 1212 ಅತ್ಯಾಚಾರ ಪ್ರಕರಣ ದಾಖಲಾದರೆ, ಪೋಕ್ಸೋ ಪ್ರಕರಣದ ಅಡಿ ಒಟ್ಟಾರೆ 1530 ಪ್ರಕರಣ ದಾಖಲಾಗಿವೆ. ಜೊತೆಗೆ ಮಕ್ಕಳ ಮೇಲಿನ 7468 ಅಪರಾಧ ದಾಖಲಾಗಿದ್ದು, 22 ಮಕ್ಕಳ ಕೊಲೆ ಆಗಿದೆ.
ಮಹಿಳೆಯರ ಅಪಹರಣ ಮತ್ತು ಕಿಡ್ನಾಪ್ ಪ್ರಕರಣಗಳು 4032 ಪ್ರಕರಣಗಳು ಆದರೆ, ಮಹಿಳೆಯರ ಮೇಲಿನ ಹಲ್ಲೆ ಪ್ರಕರಣ 2029 ಆಗಿದ್ದು, ಅತ್ಯಾಚಾರ ಯತ್ನ ಪ್ರಕರಣ 4 ದಾಖಲಾಗಿವೆ.