ಥಾಣೆ (ಮಹಾರಾಷ್ಟ್ರ): ಥಾಣೆ ಮುನ್ಸಿಪಲ್ ಸಹಾಯಕ ಕಮೀಷನರ್ ಮಹೇಶ್ ಅಹೆರ್ ಮೇಲೆ ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಬುಧವಾರ ಥಾಣೆ ನಾಗರಿಕ ಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಈ ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಥಾಣೆ ಪೊಲೀಸರು ಜಿತೇಂದ್ರ ಅವ್ಹಾದ್ ಮತ್ತು ಅವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 353, 332, 307, 506, 143, 148, 149 ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಜಿತೇಂದ್ರ ಅವ್ಹಾದ್ ಅವರಿಗೆ ಸಂಬಂಧಿಸಿದ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಮಹೇಶ್ ಅಹೆರ್ ಅವರು ಆಡಿಯೋದಲ್ಲಿ ಜಿತೇಂದ್ರ ಅವರ ಮಗಳು ಮತ್ತು ಅಳಿಯನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಜಿತೇಂದ್ರ ಬೆಂಬಲಿಗರು ಮಹೇಂದ್ರ ಅವರನ್ನು ಸುತ್ತುವರಿದು ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ಪಾರ್ಕಿಂಗ್ ಪ್ರದೇಶದಲ್ಲಿ ಥಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕೆಲವು ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಅವರನ್ನು ದೂರ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಗಾಯಗೊಂಡಿದ್ದ ಮಹೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಿತೇಂದ್ರ ಅವ್ಹಾದ್, ಮಹೇಂದ್ರ ಅಹೆರ್ ಅವರು ಗೂಂಡಾಗಳೊಂದಿಗೆ ಸಂಪರ್ಕದಲ್ಲಿದ್ದು ಸ್ಪೇನ್ನಲ್ಲಿರುವ ನನ್ನ ಮಗಳನ್ನು ಕೊಲ್ಲಲು ಶೂಟರ್ ಅನ್ನು ನೇಮಿಸಿರುವುದಾಗಿ ಆರೋಪಿಸಿದ್ದಾರೆ. ಜೊತೆಗೆ, ನನಗೆ ಅವರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. "ಹಲ್ಲೆ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸ್ಪೇನ್ನಲ್ಲಿರುವ ನನ್ನ ಮಗಳನ್ನು ಕೊಲ್ಲುವುದಾಗಿ ಮಹೇಶ್ ಅಹೆರ್ ಹೇಳಿಕೊಂಡಿದ್ದಾರೆ. ಅವರು ದಿನಕ್ಕೆ 40 ಲಕ್ಷ ರೂಪಾಯಿ ಸಂಪಾದನೆ ಮಾಡುವ ಹಾಗೆ ಮಾತನಾಡುತ್ತಾರೆ ಮತ್ತು ಒಬ್ಬ ಡಾನ್ನಂತೆಯೇ ವರ್ತಿಸುತ್ತಾರೆ" ಎಂದು ದೂರಿದ್ದಾರೆ. ಹಲ್ಲೆ ಆರೋಪದ ಬಳಿಕ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.