ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ತಿಂಗಳ ಹಿಂದೆ ಎರಡು ಬಣಗಳಾಗಿ ಇಬ್ಭಾಗವಾಗಿತ್ತು. ಒಂದೆಡೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗು ಹಿರಿಯ ರಾಜಕಾರಣಿ ಶರದ್ ಪವಾರ್ ಬಿಜೆಪಿಯನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ಮತ್ತೊಂದೆಡೆ, ಸಂಬಂಧದಲ್ಲಿ ಪುತ್ರರಾದ ಅಜಿತ್ ಪವಾರ್ ಅವರು ಶಿವಸೇನೆ (ಏಕನಾಥ್ ಶಿಂಧೆ ಬಣ) ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಸೇರುವ ಮೂಲಕ ಕೇಸರಿ ಪಕ್ಷದ ಸಖ್ಯ ಬೆಳೆಸಿದ್ದಾರೆ. ಹೀಗಾಗಿ ಎನ್‌ಸಿಪಿ ಶರದ್ ಹಾಗೂ ಅಜಿತ್ ಬಣವಾಗಿ ರೂಪುಗೊಂಡಿದೆ. ಆದರೂ, ಇಬ್ಬರು ನಾಯಕರು ಮೇಲಿಂದ ಮೇಲೆ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಮಹಾರಾಷ್ಟ್ರ ಮಾತ್ರವಲ್ಲ, ದೇಶದ ರಾಜಕಾರಣದ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಆಗಸ್ಟ್ 25 - 26ಕ್ಕೆ ಮುಂಬೈನಲ್ಲಿ ನಡೆಯಲಿದೆ 'ಇಂಡಿಯಾ'ದ ಮೂರನೇ ಸಭೆ
ಕಳೆದ ತಿಂಗಳು ಏಕನಾಥ್ ಶಿಂಧೆ ಬಣ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದ್ದರು. ಅವರ ಬೆಂಬಲಿತ ಎನ್‌ಸಿಪಿಯ ಇತರ 8 ಶಾಸಕರು ಕೂಡ ಸಚಿವರಾಗಿದ್ದಾರೆ. ಶರದ್ ಪವಾರ್ ಬೆಂಬಲಿತ ಮತ್ತೊಂದು ಗುಂಪು ಪ್ರತಿಪಕ್ಷದಲ್ಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಎದುರಿಸಲು ಸಜ್ಜಾಗುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಶರದ್ ಕೂಡ ಪ್ರಮುಖರು. ಇದರ ನಡುವೆ ಜುಲೈ 16ರಂದು ಶರದ್ ಪವಾರ್ ಹಾಗೂ ಅಜಿತ್ ಪವಾರ್ ಭೇಟಿ ಮಾಡಿದ್ದರು. ಇದೀಗ ಒಂದು ತಿಂಗಳ ಅಂತರದಲ್ಲಿ ಅಂದರೆ ಶನಿವಾರ (ಆಗಸ್ಟ್ 12) ಸಹ ಉಭಯ ನಾಯಕರು ಪುಣೆಯಲ್ಲಿ ಭೇಟಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಭಾನುವಾರ ಶರದ್ ಪವಾರ್ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ, ಹೊಸ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಹಿತೈಷಿಗಳಿಂದ ನನ್ನ ಮನವೊಲಿಕೆ - ಶರದ್: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಳದಲ್ಲಿ ಮಾತನಾಡಿದ ಶರದ್ ಪವಾರ್, ಕೆಲವು ಹಿತೈಷಿಗಳು ನನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ, ನಮ್ಮ ಪಕ್ಷ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ''ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ನನ್ನ ಪಕ್ಷ (ಎನ್‌ಸಿಪಿ) ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಭಾರತೀಯ ಜನತಾ ಪಕ್ಷದೊಂದಿಗಿನ ಯಾವುದೇ ಸಂಬಂಧವು ಎನ್‌ಸಿಪಿಯ ರಾಜಕೀಯ ನೀತಿಗೆ ಹೊಂದಿಕೆಯಾಗುವುದಿಲ್ಲ'' ಎಂದು ಸುದ್ದಿಗಾರರಿಗೆ ತಿಳಿಸಿದರು.